ಇವಿಎಂ ಜಮಾನದಲ್ಲೂ ಎಚ್ಚರಿಕೆ ನೋಟೀಸಿನಲ್ಲಾಗಿಲ್ಲ ಬದಲಾವಣೆ !
Update: 2018-05-12 21:20 IST
ಮಂಗಳೂರು, ಮೇ 12: ಬಿಗಿ ಬಂದೋಬಸ್ತ್, ಸಕಲ ಸೌಕರ್ಯ, ವಿಶೇಷ ಆಕರ್ಷಣೆಗಳ ನಡುವೆ ಈ ಬಾರಿಯ ಚುನಾವಣೆ ಸುದ್ದಿ ಮಾಡಿದ್ದರೂ, ಆಯೋಗದ ಎಚ್ಚರಿಕೆಯ ನೋಟಿಸ್ ಮಾತ್ರ ಹುಬ್ಬೇರಿಸುವಂತಿದೆ.
ಮತಗಟ್ಟೆಗಳ ಹೊರಗಡೆ ಗೋಡೆಗಳಲ್ಲಿ ಆಯೋಗದಿಂದ ಅಂಟಿಸಲಾಗಿರುವ ನೋಟೀಸಿನಲ್ಲಿ, ‘‘ಪೊಲೀಂಗ್ ಸ್ಟೇಷನ್ನಿನ ಸುತ್ತ ನೂರು ಮೀಟರೊಳಗೆ ಪ್ರಚಾರ ಮಾಡಕೂಡದು. ವೋಟಿನ ಕಾಗದವನ್ನು ವೋಟಿನ ಪೆಟ್ಟಿಗೆಯಲ್ಲಿಯೇ ಹಾಕಬೇಕು. ಅದನ್ನು ಹೊರಗೆ ತೆಗೆದುಕೊಂಡು ಹೋಕೂಡದು. ಉಲ್ಲಂಘನೆಯು ಕಾನೂನಿನ ಮೇರೆಗೆ ಶಿಕ್ಷಿಸಲ್ಪಡುವುದು’’ ಎಂಬ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿರುವ ನೋಟಿಸ್ ಹಾಸ್ಯಾಸ್ಪದವೆನ್ನಿಸುವಂತಿದೆ.
ಇವಿಎಂನಲ್ಲಿ ಬಟನ್ ಒತ್ತುವ ಮೂಲಕ ಮತ ಚಲಾಯಿಸುವ ಅವಕಾಶ 2004ರಿಂದ ಜಾರಿಯಾಗಿದ್ದರೂ, ವೋಟಿನ ಕಾಗದದ ನೋಟೀಸಿನ ಎಚ್ಚರಿಕೆ ಮಾತ್ರ ಬದಲಾಗಿಲ್ಲವಲ್ಲ ಎಂದು ಮತದಾರರು ಆಡಿಕೊಳ್ಳುವಂತಾಗಿದೆ.