ಅಯೋಧ್ಯೆಯಲ್ಲಿ ರಾಮಮಂದಿರ; ತೀರ್ಪು ವಿರುದ್ಧ ಬಂದರೆ ಪ್ರತಿಭಟನೆ: ವಿಎಚ್‌ಪಿ ಅಧ್ಯಕ್ಷ
ಹರಿದ್ವಾರ, ಮೇ 13: ರಾಮ ಮಂದಿರ ವಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಿಂದೂಗಳ ನಂಬಿಕೆಗೆ ವಿರುದ್ಧವಾಗಿ ಬಂದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾನೂನು ರೂಪಿಸುವಂತೆ ಸ್ಥಳೀಯ ಸಂಸದರನ್ನು ಒತ್ತಾಯಿಸುವ ಸಲುವಾಗಿ ರಾಷ್ಟ್ರಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತಿನ ನೂತನ ಅಂತರ್ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ ಘೋಷಿಸಿದ್ದಾರೆ.
ರಾಮ ಮಂದಿರ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಗೆಹರಿಯುವ ನಿರ್ಣಾಯಕ ಹಂತದಲ್ಲಿದ್ದು, ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಪೂರಕವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ ಎಂಬ ವಿಶ್ವಾಸವನ್ನು ವಿಎಚ್‌ಪಿ ಕಾನೂನು ತಜ್ಞರು ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರ ವಹಿಸಿಕೊಂಡ ಬಳಿಕ ಮೊಟ್ಟಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದ ಅವರು ಸ್ಪಷ್ಟಪಡಿಸಿದ್ದಾರೆ.
"ಆದಾಗ್ಯೂ ಕೋರ್ಟ್ ತೀರ್ಪು ಹಿಂದೂಗಳ ಭಾವನೆಗಳಿಗೆ ವಿರುದ್ಧವಾಗಿ ಬಂದರೆ, ದೇಶಾದ್ಯಂತ ಕೋಟ್ಯಂತರ ಹಿಂದೂಗಳು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಕಾನೂನು ರೂಪಿಸುವಂತೆ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಸಲುವಾಗಿ ಆಂದೋಲನ ಆರಂಭಿಸಲಿದ್ದಾರೆ" ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದರು.
ಆರೇಳು ತಿಂಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ಇದು ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಾಮಾಜಿಕ ಸಾಮರಸ್ಯ, ಗೋಹತ್ಯೆ ಮತ್ತು ಮತಾಂತರ ವಿರುದ್ಧ ಜಾಗೃತಿ ಮೂಡಿಸುವುದು, ರಾಮಮಂದಿರ ನಿರ್ಮಾಣಾ ಮತ್ತು ದೇಶದ ನದಿಗಳ ಸಂರಕ್ಷಣೆ ಕಾರ್ಯಸೂಚಿಯಡಿ ವಿಎಚ್‌ಪಿ ಕಾರ್ಯನಿರ್ವಹಿಸಲಿದೆ ಎಂದರು.