ಭಾರತೀಯ ತಟ ರಕ್ಷಣಾ ಪಡೆಯ ಗಸ್ತು ನೌಕೆ ಐಸಿಜಿಎಸ್ ವಿಕ್ರಮ್ ಮಂಗಳೂರಿಗೆ ಆಗಮನ
ಮಂಗಳೂರು, ಮೇ 13: ಭಾರತೀಯ ತಟ ರಕ್ಷಣಾ ಪಡೆಗೆ ಭಾರತ ರಕ್ಷಣಾ ಪಡೆಯ ಮೂಲಕ ನೀಡಲಾದ ಗಸ್ತು ನೌಕೆ ಐಸಿಜಿಎಸ್ ವಿಕ್ರಮ್ ನ್ನು ಇಂದು ಕರಾವಳಿ ತಟ ರಕ್ಷಣಾ ಪಡೆಯ ಮಂಗಳೂರು ಕೇಂದ್ರಕ್ಕೆ ಚೆನ್ನೈಯಿಂದ ಆಗಮಿಸಿದ ಸಂದರ್ಭದಲ್ಲಿಂದು ಸ್ವಾಗತಿಸಲಾಯಿತು.
14 ಅಧಿಕಾರಿಗಳು 88 ಸಿಬ್ಬಂದಿಗಳನ್ನು ಒಳಗೊಂಡ ಕಮಾಂಡೆಂಟ್ ರಾಜ್ ಕಮಾಲ್ ಸಿನ್ಹಾ ರವರನ್ನೊಳಗೊಂಡ ಎರಡು ಇಂಜಿನ್‌ಗಳ ಹೆಲಿಕಾಪ್ಟರ್‌ನ್ನು ಹೊತ್ತೊಯ್ಯಬಲ್ಲ 98 ಮೀಟರ್ ಉದ್ದ ಹಾಗೂ 15 ಮೀಟರ್ ಅಗಲದ 12.7 ಎಂ.ಎಂ.(ಎಫ್‌ಸಿಎಸ್ )ಗನ್ ಹಾಗೂ 30 ಎಂ.ಎಂ. ಗನ್‌ಗಳನ್ನು ಹೊಂದಿರುವ ವಿಕ್ರಮ್ ಹೆಸರಿನಂತೆ ಶೌರ್ಯ ಪರಾ ಕ್ರಮದ ಸಂಕೇತವಾದ ಈ ಗಸ್ತು ನೌಕೆ ಚೆನ್ನೈಯ ಲಾರ್ಸನ್ ಆ್ಯಂಡ್ ಕಂಪೆನಿಯ ಮೂಲಕ ದೇಶೀಯವಾಗಿ ವಿನ್ಯಾಸಗೊಂಡು ನಿರ್ಮಾಣ ಗೊಂಡಿದೆ.
ಸಮುದ್ರದಲ್ಲಿ ನಿರಂತರವಾಗಿ 20 ದಿನಗಳ ಕಾಲ ಗಸ್ತು ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.ಎ.11ರಂದು ರಕ್ಷಣಾ ಸಚಿವ ಡಾ.ಸುಭಾಶ್ ಭಾಮ್ರೆ ಚೆನ್ನೈಯಲ್ಲಿ ವಿಕ್ರಮ್ ನೌಕೆಯನ್ನು ಭಾರತೀಯ ತಟ ರಕ್ಷಣಾ ಪಡೆಗೆ ನೀಡಿದ್ದು ಇಂದು ಮಂಗಳೂರಿಗೆ ಆಗಮಿಸಿದೆ.ವಿಕ್ರಮ್ ಐಸಿಜಿಎಸ್ ಮಂಗಳೂರಿಗೆ ಆಗಮಿಸುವ ಮೂಲಕ ಕರ್ನಾಟಕ ಕರಾವಳಿ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಈ ನೌಕೆ ಮಂಗಳೂರು ಬಂದರು ಮೂಲಕ ಪಶ್ಚಿಮವಲಯ ಕೋಸ್ಟ್ ಗಾರ್ಡ್ ಕಮಾಂಡರ್ ಮೂಲಕ ಕಾರ್ಯಾಚರಣೆ ನಡೆಸಲಿದೆ ಎಂದು ಕೋಸ್ಟ್ ಗಾರ್ಡ್ ಮಂಗಳೂರು ಘಟಕದ ಕಮಾಂಡೆಂಟ್ ಸತ್ವನ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವ,ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ನರೋತ್ತಮ ಮಿಶ್ರಾ,ನವಮಂಗಳೂರು ಬಂದರು ಮಂಡಳಿಯ ಪ್ರಭಾರ ಅಧ್ಯಕ್ಷ ಸುರೇಶ್ ಶಿರ್ವಾಡ್ಕರ್,ಕೋಸ್ಟ್ ಗಾರ್ಡ್ ಮಂಗಳೂರು ಘಟಕದ ಕಮಾಂಡೆಂಟ್ ಸತ್ವನ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.