ಆತೂರು ಹಾಜಿ ಇಬ್ರಾಹಿಂ ಮುಸ್ಲಿಯಾರ್ ನಿಧನ
ಉಪ್ಪಿನಂಗಡಿ, ಮೇ 13: ಪ್ರಮುಖ ಉಲೆಮಾ ನೇತಾರರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದ, ಸಮಸ್ತದ ಹಿರಿಯ ಧಾರ್ಮಿಕ ವಿದ್ವಾಂಸ ಆತೂರು ಹಾಜಿ ಇಬ್ರಾಹಿಂ ಮುಸ್ಲಿಯಾರ್ (77) ಕೇರಳದ ಕಣ್ಣೂರುನಿಂದ ಉಜಿರೆಗೆ ಬರುವ ಹಾದಿಯಲ್ಲಿ ಕಾರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಕೇರಳದ ಕಣ್ಣೂರು ಪಾಲತ್ತಿನ್‌ಕೆರೆ ನಿವಾಸಿ ಆಗಿರುವ ಇವರು ಸುಮಾರು 11 ವರ್ಷಗಳ ಕಾಲ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು.
ಹೀಗಾಗಿ ಅವರು ಆತೂರು ಇಬ್ರಾಹಿಂ ಮುಸ್ಲಿಯಾರ್ ಎಂದೇ ಚಿರಪರಿಚಿತರಾಗಿದ್ದರು. ಇವರು ಮಾಡನ್ನೂರು, ಉಜಿರೆ ಜುಮಾ ಮಸೀದಿಯಲ್ಲಿಯೂ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಕೆಲ ವರ್ಷಗಳಿಂದ ನಿವೃತ್ತಿ ಹೊಂದಿ ಕೇರಳದಲ್ಲಿ ವಾಸ್ತವ್ಯ ಹೊಂದಿದ್ದರು.
ಅವರು ಉಜಿರೆಯಲ್ಲಿ ಸಲ್ಲಿಸಿದ್ದ ಸೇವೆಗೆ ಗೌರವಾರ್ಥವಾಗಿ ಅಲ್ಲಿನ ಯುವ ಸಂಘಟನೆಯೊಂದು ಅವರಿಗೆ ಮೇ. 13ರಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೀಗಾಗಿ ಅವರು ಮೇ. 12ರಂದು ಮಧ್ಯಾಹ್ನ ಇಲ್ಲಿಗೆ ಬರುವ ಸಲುವಾಗಿ ಕಾರಿನಲ್ಲಿ ಬರುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದರು. ಇಬ್ರಾಹಿಂ ಮುಸ್ಲಿಯಾರ್‌ರವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.