×
Ad

ಉಡುಪಿ ಮತ ಎಣಿಕೆ ಕೇಂದ್ರದಲ್ಲಿ ಮತಯಂತ್ರ ಭದ್ರ: ಬಿಗಿ ಬಂದೋಬಸ್ತ್

Update: 2018-05-13 19:33 IST

ಉಡುಪಿ, ಮೇ 13: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತಯಂತ್ರಗಳು ಉಡುಪಿ ಕುಂಜಿ ಬೆಟ್ಟುವಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ಮತ ಎಣಿಕೆ ಕೇಂದ್ರಕ್ಕೆ ಭದ್ರವಾಗಿದ್ದು, ಈ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಶನಿವಾರ ಮತದಾನ ಮುಗಿದ ಬಳಿಕ ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಂದ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಡಿಮಸ್ಟ ರಿಂಗ್ ಕೇಂದ್ರವಾಗಿರುವ ಉಡುಪಿ ಸೈಂಟ್ ಸಿಸಿಲಿಸ್ ಶಾಲೆಗೆ ತರಲಾಯಿತು. ಅದೇ ರೀತಿ ಕಾರ್ಕಳ ಕ್ಷೇತ್ರ ವ್ಯಾಪ್ತಿಯ ಮತಯಂತ್ರವನ್ನು ಕಾರ್ಕಳ ಮಂಜು ನಾಥ ಪೈ ಸಭಾಂಗಣಕ್ಕೆ ಮತ್ತು ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯ ಮತಯಂತ್ರಗಳನ್ನು ಕುಂದಾಪುರ ಭಂಡಾರ್ಕರ್ಸ್‌ ಕಾಲೇಜಿನ ಡಿ ಮಸ್ಟರಿಂಗ್ ಕೇಂದ್ರ ತರಲಾಯಿತು.

ಈ ಮೂರು ಕೇಂದ್ರಗಳಲ್ಲಿದ್ದ ಎಲ್ಲ ಮತಯಂತ್ರಗಳನ್ನು ನಿನ್ನೆ ರಾತ್ರಿ ಯಿಂದಲೇ ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯಲ್ಲಿ ಕೊಂಡೊ ಯ್ಯಲಾಯಿತು. ಈ ಪ್ರಕ್ರಿಯೆ ತಡರಾತ್ರಿಯವರೆಗೂ ಮುಂದುವರೆದಿದ್ದು, ಬೈಂದೂರು ಕ್ಷೇತ್ರದ ಮತಯಂತಗಳನ್ನು ಇಂದು ಬೆಳಗ್ಗೆ 7.30ರ ಸುಮಾರಿಗೆ ತರಲಾಯಿತು.

ಮತ ಎಣಿಕಾ ಕೇಂದ್ರದ ಸುತ್ತ ಬಿಗಿ ಭದ್ರತೆಗಾಗಿ ಕೇಂದ್ರೀಯ ಅರೆ ಸೇನಾ ಪಡೆ 120 ಸಿಬ್ಬಂದಿಗಳು, ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ ಕಣ್ಗಾವಳಿಗಾಗಿ ಕೇಂದ್ರದಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ.

ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ ಸೋನಾಮಣೆ ಹಾಗೂ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಇಬ್ಬರು ವೃತ್ತ ನಿರೀಕ್ಷಕರು, ನಾಲ್ವರು ಉಪನಿರೀಕ್ಷಕರು, ಒಟ್ಟು 70 ಹೆಡ್‌ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಗಳು ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ ಎಣಿಕಾ ಕೇಂದ್ರದ ಆವರಣದಲ್ಲಿ ಒಂದು ವಿದ್ವಂಸಕಕೃತ್ಯ ತಡೆ ದಳ, ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಒಂದು ವಾಹನವನ್ನು ಇರಿಸಲಾಗಿದೆ.

ಮೇ 15-17ರವರೆಗೆ ನಿಷೇಧಾಜ್ಞೆ
ಚುನಾವಣಾ ಫಲಿತಾಂಶದ ಪ್ರಭಾವದಿಂದ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯುವ ಸಾಧ್ಯತೆಗಳಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಠಿಯನ್ನು ಮನಗಂಡು ಮುಂಜಾಗೃತ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಮೇ 15ರ ಬೆಳಗ್ಗೆ 6ಗಂಟೆಯಿಂದ ಮೇ 17ರ ಬೆಳಗ್ಗೆ 6 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News