×
Ad

ರಿಲ್ಯಾಕ್ಸ್ ಮೂಡಲ್ಲಿ ಅಭ್ಯರ್ಥಿಗಳು: ಸೋಲು ಗೆಲುವಿನ ಲೆಕ್ಕಚಾರ

Update: 2018-05-13 19:52 IST

ಉಡುಪಿ, ಮೇ 13: ಚುನಾವಣೆ ಮುಗಿದ ನಂತರ ಈಗ ಎಲ್ಲ ಕಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ತಿಂಗಳುಗಳ ಕಾಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬೀದಿ ಬೀದಿ ತಿರುಗಾಡಿ ಮತಯಾಚನೆ ಮಾಡುತ್ತಿದ್ದ ಉಡುಪಿ ಜಿಲ್ಲೆಯ 34 ಅಭ್ಯರ್ಥಿಗಳು ಇದೀಗ ರಿಲ್ಯಾಕ್ ಮೂಡಿನಲ್ಲಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಈ ಬಾರಿಯ ಚುನಾವಣೆ ಯಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂದು 10-15 ವಿವಾಹ ಹಾಗೂ ಶುಭಾ ಕಾರ್ಯಗಳಲ್ಲಿ ಪಾಲ್ಗೊಂಡು ಕೊಳಲಗಿರಿಯ ತನ್ನ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಜಿಲ್ಲಾ ಉಸ್ತು ವಾರಿ ಸಚಿವ ಹಾಗೂ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿ, 100ಕ್ಕೆ 100 ನನ್ನದೇ ಗೆಲುವು. ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲೂ ಜಯ ಗಳಿಸಬಹುದು. ನನ್ನ ಮತದಾರರ ಮೇಲೆ ನನಗೆ ವಿಶ್ವಾಸ ಇದೆ ಎಂದು ತಿಳಿಸಿದರು.

‘ಕಾಪು ಕ್ಷೇತ್ರದಲ್ಲಿ ಗರಿಷ್ಟ ಪ್ರಮಾಣದ ಮತದಾನ ನಡೆದಿದೆ. ಐದು ವರ್ಷದ ಸಾಧನೆ ಜೊತೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನ ಮುಂದೆ ಹೋಗಿದ್ದೇನೆ. ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ನನಗೆ ಗೆಲುವು ಖಚಿತ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಮತಗಳೇ ಹೆಚ್ಚಿವೆ’ ಎಂದು ಮನೆಯಲ್ಲಿ ಸಮಯ ಕಳೆಯುತ್ತಿರುವ ಮಾಜಿ ಶಾಸಕ ಹಾಗೂ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಯೂ ಗೆಲವು ಸಾಧಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯೂ ಗೆಲುವಿನ ನಗೆ ಬೀರುವ ವಿಶ್ವಾಸ ದಲ್ಲಿದ್ದಾರೆ. ‘ಕ್ಷೇತ್ರದ ಕರಾವಳಿ, ನಗರ ಹಾಗೂ ಮಲೆನಾಡು ಪ್ರದೇಶದ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಗೆಲುವು ನನಗೆ ನಿಶ್ಚಿತ. ಗೆಲುವಿನ ಅಂತರ ಕಳೆದ ಬಾರಿಗಿಂತ ಕಡಿಮೆ ಆಗಲ್ಲ ಎಂದು ಹಾಲಾಡಿ ತಿಳಿಸಿದರು.

20ಕ್ಕೂ ಅಧಿಕ ವಿವಾಹ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಪಾಲ್ಗೊಂಡು ಓಡಾಟದಲ್ಲಿದ್ದ ಉಡುಪಿ ಬಿಜೆಪಿ ಅಭ್ಯರ್ಥಿ ಕೆ.ರಘುಪತಿ ಭಟ್ ತನ್ನ ಗೆಲುವಿನ ಲೆಕ್ಕಚಾರವನ್ನು ಹೇಳಿಕೊಂಡಿದ್ದಾರೆ. ಉಡುಪಿ ಕ್ಷೇತ್ರದ 213 ಬೂತ್‌ಗಳಲ್ಲಿ 8-10 ಬೂತ್‌ಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲ ಬೂತ್‌ಗಳಿಗೆ ಬಿಜೆಪಿಗೆ ಹೆಚ್ಚು ಮತ ಬರುತ್ತದೆ. ಹಾಗಾಗಿ ನಾವು ಈ ಬಾರಿ ಗೆಲ್ಲುವುದು ಖಚಿತ ಎಂದು ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ಅದೇ ರೀತಿ ಕಾಪು ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್.ಮೆಂಡನ್ ಹಾಗೂ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಗೋಪಾಲ ಭಂಡಾರಿ ಅವರು ಕೂಡ ಗೆಲ್ಲುವ ವಿಶ್ವಾಸವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News