×
Ad

‘ವಾರ್ತಾಭಾರತಿ’ಯ ಹೊಸ ಮುದ್ರಣ ಸಂಕೀರ್ಣ ಉದ್ಘಾಟನೆ

Update: 2018-05-13 20:57 IST

ಮಂಗಳೂರು, ಮೇ 13: ‘ಜನದನಿಯ ಸಾರಥಿ’ಯಾಗಿರುವ ‘ವಾರ್ತಾಭಾರತಿ’ ಪತ್ರಿಕೆಯ ಹೊಸ ಮುದ್ರಣ ಸಂಕೀರ್ಣವು ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ನಾಡಿನ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಗಣ್ಯರ ಹಾಗೂ ಓದುಗರ ಸಮ್ಮುಖ ರವಿವಾರ ಉದ್ಘಾಟನೆಗೊಂಡಿತು.

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಮುದ್ರಣ ಯಂತ್ರದ ಬಟನ್ ಅದುಮುವ ಮೂಲಕ ಮುದ್ರಣ ಸಂಕೀರ್ಣವನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ತಂತ್ರಜ್ಞಾನಕ್ಕೆ ಅನುಗುಣವಾಗಿ ಮಾಧ್ಯಮಗಳಲ್ಲೂ ಬದಲಾವಣೆ ಅತ್ಯಗತ್ಯವಾಗಿದೆ. ಇದೊಂದು ಸವಾಲು ಕೂಡಾ ಹೌದು. ಕ್ಷಣ ಕ್ಷಣದ ಸುದ್ದಿಗಳು ಸಾಮಾಜಿಕ ಜಾಲತಾಣ ಸಹಿತ ವಿವಿಧ ಮಾಧ್ಯಮಗಳಲ್ಲಿ ಲಭ್ಯವಾಗುವ ಈ ಕಾಲಘಟ್ಟದಲ್ಲಿ ದಿನಪತ್ರಿಕೆಗಳು ಯಾವ ಸುದ್ದಿಯ ಮೂಲಕ ಓದುಗರ ಮನಮುಟ್ಟಬಹುದು ಎಂಬುದು ಕೂಡ ಪ್ರಶ್ನೆಯಾಗಿ ಉಳಿದಿದೆ. ಇಂತಹ ಸಂದರ್ಭದಲ್ಲಿ ‘ವಾರ್ತಾಭಾರತಿ’ ಪತ್ರಿಕೆಯು ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸವಾಲುಗಳನ್ನು ಎದುರಿಸಿ ಮುನ್ನಡೆದಿರುವುದು ಸಣ್ಣ ವಿಚಾರವಲ್ಲ. ಇದೊಂದು ಸಾಧನೆಯ ಮೈಲುಗಲ್ಲು ಕೂಡಾ ಆಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ‘ವಾರ್ತಾಭಾರತಿ’ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ‘ವಾರ್ತಾಭಾರತಿ’ ಪತ್ರಿಕೆಯು ಪಕ್ಷಾತೀತವಾದುದು, ಜಾತ್ಯತೀತವಾದುದು. ನಾವು ಯಾವ ಪಕ್ಷಕ್ಕೂ, ಯಾವ ರಾಜಕಾರಣಿಗಳಿಗೂ ನಿಷ್ಠರಲ್ಲ. ಕಾಂಗ್ರೆಸ್ ಪಕ್ಷದ ಪಾಲಿಗಂತೂ ನಾವು ವಿಮರ್ಶಕರಾಗಿಯೇ ಇದ್ದೇವೆ. ಯಾರೂ ನಮ್ಮಿಂದ ನಿಷ್ಠೆಯನ್ನು ನಿರೀಕ್ಷಿಸಿದರೆ ಖಂಡಿತಾ ನಿರಾಶೆ ಕಾದೀತು. ಇದು ಸಂಸ್ಥೆಯ ಧೋರಣೆಯೂ ಆಗಿದೆ. ಪಕ್ಷಗಳಿಗೆ, ರಾಜಕಾರಣಿಗಳಿಗೆ ನಿಷ್ಠರಾದರೆ ನಮ್ಮ ಅಸ್ತಿತ್ವವನ್ನು ನಾವು ಕಳಕೊಂಡಂತೆ ಎಂಬ ಪ್ರಜ್ಞೆ ನಮಗಿದೆ. ನಮ್ಮದು ಯಾವತ್ತೂ ಕೂಡ ಪಕ್ಷದ ಭಟ್ಟಂಗಿ ಸಂಸ್ಥೆಯಲ್ಲ. ಅಧಿಕಾರದಲ್ಲಿರುವವರಿಗೆ ನಾವು ಪ್ರತಿಪಕ್ಷವಾಗಿಯೇ ಇರುತ್ತೇವೆ. ಜೊತೆಗೆ ಸಮಾಜದಲ್ಲಿ ಪ್ರಾತಿನಿಧ್ಯ ಇಲ್ಲದವರಿಗೆ ಪ್ರಾತಿನಿಧ್ಯ ನೀಡುತ್ತೇವೆ, ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತೇವೆ ಎಂದರು.

ಮಾಧ್ಯಮಗಳು ಇಂದು ಉದ್ಯಮಗಳ ಕೈ ಸೇರಿವೆ. ಹಾಗಾಗಿ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಕಾಣುತ್ತಿಲ್ಲ. ‘ವಾರ್ತಾಭಾರತಿ’ಯು ಆ ಅಪವಾದಕ್ಕೆ ಹೊರತಾಗಿವೆ. ಸಾಮಾಜಿಕ ಜಾಲತಾಣಗಳು ಜನ್ಮತಾಳಿದ ಬಳಿಕವಂತೂ ಅಭಿವ್ಯಕ್ತಿ ಸ್ವಾತಂತ್ರವು ಮಿತಿ ಮೀರುತ್ತಿವೆ. ಕೆಲವೊಮ್ಮೆ ಅವು ಪ್ರಜಾಪ್ರಭುತ್ವಕ್ಕೂ ಸವಾಲಾಗಿ ಪರಿಣಮಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸುವ ಅತೀ ದೊಡ್ಡ ಜವಾಬ್ದಾರಿಯು ‘ವಾರ್ತಾಭಾರತಿ’ಯಂತಹ ಮಾಧ್ಯಮಗಳ ಕೈಯಲ್ಲಿವೆ.
-ಎಲ್.ಕೆ. ಅತೀಕ್
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ

ವೃತ್ತಿ ಉದ್ಯಮವಾದಾಗ ಆಗುವ ಅನಾಹುತಗಳು ಇದೀಗ ಮಾಧ್ಯಮಗಳಿಗೂ ತಗುಲಿವೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಸಮುದಾಯದ ರಾಜಕಾರಣಿಗಳ, ಹೋರಾಟಗಾರರ ಸಾಧನೆಯನ್ನು ಜಾತಿ, ಧರ್ಮದಿಂದ ನೋಡಿ ತೀರ್ಪು ನೀಡುವ ಈ ಕಾಲಘಟ್ಟದಲ್ಲಿ ‘ವಾರ್ತಾಭಾರತಿ’ಯನ್ನು ಅದರ ಸಂಪಾದಕರ, ನಿರ್ದೇಶಕರ ಜಾತಿ, ಧರ್ಮವನ್ನು ನೋಡಿ ತೀರ್ಪು ನೀಡುವ ಪರಿಪಾಠ ಬೇಡ. ‘ವಾರ್ತಾಭಾರತಿ’ ಯಾವತ್ತೂ ಕೂಡ ಒಂದು ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಸಮಾಜದ ಶೋಷಿತರ, ಮಹಿಳೆಯರ, ದೌರ್ಜನ್ಯಕ್ಕೊಳಗಾದವರ ಧ್ವನಿಯಾಗಿದೆ. ಅದಕ್ಕೆ ಅದರ ಸಂಪಾದಕೀಯವೇ ಸಾಕ್ಷಿಯಾಗಿದೆ. ಅದು ಯಾವತ್ತೂ ಕೂಡ ಒಂದು ಸಮಾಜದ, ಧರ್ಮದ, ಸಮುದಾಯದ ವಕ್ತಾರನಂತೆ ವರ್ತಿಸುತ್ತಿಲ್ಲ. ರಾಜಕಾರಣಿಗಳು, ಬಂಡವಾಳ ಶಾಹಿಗಳು ಮಾಧ್ಯಮಗಳಿಗೆ ದಾಪುಗಾಲಿಡುವ ಈ ಸಂದರ್ಭದಲ್ಲಿ ‘ವಾರ್ತಾಭಾರತಿ’ಗೆ ಜಾಗೃತ ಓದುಗ ಸಮುದಾಯವೇ ಜೀವಾಳವಾಗಿದೆ. ಓದುಗರು ಪತ್ರಿಕೆಯ ಒಡೆಯರಾಗಲಿ. ಇದೇ ನನ್ನ ಆಶಯ.
-ದಿನೇಶ್ ಅಮೀನ್ ಮಟ್ಟು
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ

‘ವಾರ್ತಾಭಾರತಿ’ ಬಳಗವು ಯಾವ ಕಾರಣಕ್ಕೂ ಮಾಧ್ಯಮ ಸೇವೆಯಿಂದ ವಿಮುಖವಾಗಬಾರದು. ಕನಿಷ್ಠ 5 ವರ್ಷದ ಗುರಿಯೊಂದಿಗೆ ಕೆಲವು ಕನಸುಗಳನ್ನು ನನಸು ಮಾಡಬೇಕು. ಅದರಲ್ಲಿ ಹುಬ್ಬಳ್ಳಿಯ ಆವೃತ್ತಿಯನ್ನು ಹೊರತರುವುದು, ಬಾಡಿಗೆಗ ಆತುಕೊಳ್ಳದೆ ಸ್ವಂತ ಕಟ್ಟಡ ನಿರ್ಮಿಸುವುದು, ಟಿವಿ ಚಾನೆಲ್ ಹಾಗೂ ಉರ್ದು ಪತ್ರಿಕೆ ಸ್ಥಾಪಿಸುವುದು.
-ಸೈಯದ್ ಮುಹಮ್ಮದ್ ಬ್ಯಾರಿ
ಅಧ್ಯಕ್ಷರು ಬ್ಯಾರೀಸ್ ಗ್ರೂಪ್, ಬೆಂಗಳೂರು

ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಶಾಸಕ ಅಭಯಚಂದ್ರ ಜೈನ್, ಸಂವಹನ ಕ್ಯಾಂಪೇನ್ಸ್ ಪ್ರೈ.ಲಿ.ನ ನಿರ್ದೇಶಕ ನಾಸಿರ್ ಸೈಯದ್, ಮಾಧ್ಯಮ ಕಮ್ಯುನಿಕೇಶನ್ಸ್ ಲಿ.ನ ನಿರ್ದೇಶಕ ಎಚ್.ಎಂ. ಅಪ್ರೋಝ್ ಅಸ್ಸಾದಿ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಬ್ಲೋಸಂ ಫೆರ್ನಾಂಡಿಸ್ ಭಾಗವಹಿಸಿದ್ದರು.

ಇಕ್ರಾ ಅರಬಿಕ್ ಸ್ಕೂಲ್ ಮಂಗಳೂರು ಇದರ ವಿದ್ಯಾರ್ಥಿ ಹಾಫಿಝ್ ತೌಹೀದ್ ಉರ್‌ರಹ್ಮಾನ್ ಕಿರಾಅತ್ ಪಠಿಸಿದರು. ಮಾಧ್ಯಮ ಕಮ್ಯುನಿಕೇಶನ್ಸ್ ಇದರ ನಿರ್ದೇಶಕ ಯಾಸೀನ್ ಮಲ್ಪೆಸ್ವಾಗತಿಸಿ, ಪ್ರಾಸ್ತಾವಿಸಿದರು. ವಾರ್ತಾಭಾರತಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್ ಪುಷ್ಪರಾಜ್ ಬಿ.ಎನ್. ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ.ಎ.ಮೊಹಿದಿನ್, ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಬಂಜಗರೆ ಜಯಪ್ರಕಾಶ್, ನಾಗತಿಹಳ್ಳಿ ಚಂದ್ರಶೇಖರ್, ಪ್ರೊ. ಎಸ್.ಜಿ.ಸಿದ್ದರಾಮಯ್ಯ, ರಮಝಾನ್ ದರ್ಗಾ, ಬೊಳುವಾರು ಮುಹಮ್ಮದ್ ಕುಂಞಿ, ಪುರುಷೋತ್ತಮ ಬಿಳಿಮಳೆ, ಉದ್ಯಮಿಗಳಾದ ತುಂಬೆ ಮೊಯ್ದಿನ್, ಉಮರ್ ಟೀಕೆ ಅವರ ಸಂದೇಶವನ್ನು ವಾಚಿಸಲಾಯಿತು.

ಮುದ್ರಣ ವಿಭಾಗದ ಸಿಬ್ಬಂದಿಗಳಾದ ಮುಹಮ್ಮದ್ ಅಲಿ, ಅಬ್ದುಲ್ಲಾ ಜಿ.ಎಂ. ಮುಹಮ್ಮದ್ ತಂಝೀಲ್, ರಹೀಂ ಅಶ್ರಫ್ ಬ್ಯಾರಿ, ಸಮೀರುದ್ದೀನ್ ಎಂ., ಸಂದೀಪ್ ಮೂಲ್ಯ, ಮುಹಮ್ಮದ್ ಹಫೀಝ್, ಮುಹಮ್ಮದ್ ಆಸೀಫ್, ಖಲಂದರ್ ಶಾ, ರಿಯಾಝ್ ಜಿ.ಎ., ಖಾದರ್ ರಫೀಕ್, ಮುಹಮ್ಮದ್ ಅಹಮನ್ ಅವರಿಗೆ ಈ ಸಂದರ್ಭ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುರ್ರವೂಫ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ್, ಉದ್ಯಮಿಗಳಾದ ಹರ್ಷದ್ ಮೋಹ್ತೆಶಾಂ, ಮನ್ಸೂರ್ ಅಹ್ಮದ್ ಆಝಾದ್, ಹಾಜಿ ಎಸ್.ಎಂ. ರಶೀದ್, ಪಿ.ಎಂ.ಎ.ರಝಾಕ್, ಪಿ.ಬಿ.ಅಬ್ದುಲ್ ರಝಾಕ್, ಸೈಯದ್ ಮೊಯ್ದಿನ್, ಎ.ಕೆ.ಸಮೂಹ ಸಂಸ್ಥೆಯ ಸಾಜಿದ್, ನಿಯಾಝ್, ವಿಲಿಯಂ ಡಿಸೋಜ, ಭರತ್, ಪುನೀತ್ ಬ್ಯಾಂಕರ್, ಸಂಭಶಿವರಾವ್, ವೆಂಕಟ್ ಘನಿ, ಭಾರತ್ ಮುಸ್ತಫಾ, ಹಾರಿಸ್, ಬಿ.ಎ.ನಝೀರ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ನೌಶಾದ್ ಸೂರಲ್ಪಾಡಿ, ಹಾಜಿ ಬಶೀರ್ ಜೆಪ್ಪು, ಝಮೀರ್ ಅಂಬರ್, ಸಾದುದ್ದೀನ್ ಸಾಲಿ, ಬಿ.ಎ.ಅಕ್ಬರ್ ಅಲಿ, ಅಸ್ಗರ್ ಅಲಿ, ಅಹ್ಮದ್ ಬಾವಾ ಪಡೀಲ್, ಎಂ.ಮುತ್ತಲಿಬ್, ಪತ್ರಕರ್ತ ಎ.ಕೆ.ಕುಕ್ಕಿಲ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News