ದ.ಕ. ಜಿಲ್ಲೆಯಲ್ಲಿ 1858 ಮತಗಟ್ಟೆಗಳಲ್ಲಿ ಮತದಾನ
ಮಂಗಳೂರು, ಮೇ 13: ದ.ಕ. ಜಿಲ್ಲೆಯಲ್ಲಿ 1858 ಮತಗಟ್ಟೆಗಳಲ್ಲಿ ನಡೆದಿರುವ ಮತದಾನದ ಎಣಿಕೆ ಕಾರ್ಯವು 18 ಸುತ್ತಿನಲ್ಲಿ ನಡೆಯಲಿದೆ. ಮತ ಎಣಿಕೆಯ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
380 ಸೇವಾಮತದಾರರಿಗೆ ಅಂಚೆ ಮತಪತ್ರವನ್ನು ಇಟಿಪಿಬಿಎಸ್ ಮೂಲಕ ಕಳುಹಿಸಲಾಗಿದೆ. 11,401 ಕರ್ತವ್ಯ ನಿರತ ಸಿಬ್ಬಂದಿಗೆ ಅಂಚೆ ಮೂಲಕ ಮತಪತ್ರಗಳನ್ನು ನೀಡಲಾಗಿದೆ. ಮೇ 15ರಂದು ಪೂರ್ವಾಹ್ನ 8 ಗಂಟೆಯವರೆಗೆ ಸ್ವೀಕೃತವಾದ ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆಗೆ ಒಳಪಡಿಸಲಾಗುವುದು.
ಅಂದು ಪೂರ್ವಾಹ್ನ 8 ಗಂಟೆಯಿಂದ ಇಟಿಪಿಬಿಎಸ್ ಮತ್ತು ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯು ಚುನಾವಣಾಧಿಕಾರಿಯವರ ಮೇಜಿನಲ್ಲಿ ನಡೆಸಲಾಗುವುದು. ಸದ್ರಿ ಪ್ರಕ್ರಿಯೆ ಪ್ರಾರಂಭವಾದ 30 ನಿಮಿಷಗಳ ನಂತರ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು. ಮತ ಎಣಿಕೆ ಟೇಬಲ್‌ಗೆ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೊ ವೀಕ್ಷರನ್ನು ನೇಮಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮತಗಳ ಎಣಿಕೆ ನಡೆಸುವ ಬಗ್ಗೆ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆ 18ರಲ್ಲಿ 14 ಮತ ಎಣಿಕೆ ಮೇಜಿಗೆ ಮತ್ತು 1 ಚುನಾಣಾಧಿಕಾರಿ ಮೇಜಿಗೆ ಒಟ್ಟು 15 ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದಾಗಿದೆ.
ನಿಷೇಧಾಜ್ಞೆ
ಮತ ಎಣಿಕೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಹಾಗೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯ ಕಾಪಾಡುವ ದೃಷ್ಟಿಯಿಂದ ಮೇ 14 ರಾತ್ರಿ 12 ಗಂಟೆಯಿಂದ ಮೇ 16ರ ರಾತ್ರಿ 8 ಗಂಟೆಯವರೆಗೆ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು, ವಿಜಯೋತ್ಸವ ಮಾಡುವುದನ್ನು, ಮೆರಣಿಗೆ ನಡೆಸುವುದನ್ನು ನಿಷೇಧಿಸುವ ಸಲುವಾಗಿ ಕಲಂ 144ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಮದ್ಯಪಾನ ಮಾರಾಟ ನಿಷೇಧ
ಮೇ 14ರ ಸಂಜೆ 6 ಗಂಟೆಯಿಂದ ಮೇ 15ರ ರಾತ್ರಿ 12 ಗಂಟೆಯವರೆಗೆ ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ. ಸದ್ರಿ ಆದೇಶವನ್ನು ಉಲ್ಲಂಘಿಸಿದಲ್ಲಿ 6 ತಿಂಗಳ ಸೆರೆವಾಸ, 2,000 ರೂ. ದಂಡ ಅಥವಾ ಅವೆರಡು ಒಳಗೊಂಡಂತೆ ಶಿಕ್ಷೆಗೆ ಒಳಪಡಿಸಲಾಗುವುದು.
ಚುನಾವಣಾ ವೀಕ್ಷಕರ ನೇಮಕ
ಮತ ಎಣಿಕೆ ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು ಚುನಾವಣಾ ವೀಕ್ಷಕರನ್ನು ನೇಮಿಸಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಬೆನುಧಾರ್ ಬೆಹೆರ (ಮೊ. 8277807200), ಮುಡಬಿದ್ರೆ ಕ್ಷೇತ್ರ: ಪುನೀತ್ ಯಾದವ್ (8277807201), ಮಂಗಳೂರು ಉತ್ತರ: ಜೂಯಿಟ್ ಸಿಂಗ್ (09431435881), ಮಂಗಳೂರು ದಕ್ಷಿಣ: ಉಪೇಂದ್ರನಾಥ್ ಶರ್ಮಾ (8277807203), ಮಂಗಳೂರು: ಅರವಿಂದ ಕುಮಾರ್ (09431277900), ಬಂಟ್ವಾಳ: ವಿಕಾಸ್ ಯಾದವ್ ((8277807205), ಪುತ್ತೂರು: ಜಗದೀಶ್ ಪ್ರಸಾದ್ (8277807206), ಸುಳ್ಯ: ನರೈನ್‌ಲಾಲ್‌ಮೀನಾ (8277807207)