×
Ad

ಮೇ 16ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್

Update: 2018-05-14 14:34 IST

ಮಂಗಳೂರು, ಮೇ 14: ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಮತ ಎಣಿಕೆಯ ಹಿನ್ನೆಲೆಯಲ್ಲಿ ಮೇ 14ರ ರಾತ್ರಿ 12 ಗಂಟೆಯಿಂದ 16ರ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಶಾಂತಿಯುತ ಮತದಾನಕ್ಕೆ ಸಹಕರಿಸಿದ ಮತದಾರರು, ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ಗುಂಪು ಸೇರುವುದು, ವಿಜಯೋತ್ಸವ ಮಾಡುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸುವ ಸಲುವಾಗ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

ಮತ ಎಣಿಕೆ ಕೇಂದ್ರದ ಸುತ್ತಮುತ್ತ ಯಾವುದೇ ರೀತಿಯ ಅನುಚಿತ ವರ್ತನೆಗೆ ಅವಕಾಶವಿಲ್ಲ. ಸಾರ್ವಜನಿಕರು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು. ಮೇ 14ರ ಸಂಜೆ 6 ಗಂಟೆಯಿಂದ 15ರ ರಾತ್ರಿ 12 ಗಂಟೆಯವರೆಗೆ ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ.

ಮಧ್ಯಾಹ್ನ 2 ಗಂಟೆಯೊಳಗೆ ಪೂರ್ಣ ಫಲೀತಾಂಶ ನಿರೀಕ್ಷೆ

ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಬೊಂದೇಲ್‌ನ ಮಹಾತ್ಮಗಾಂಧಿ ಶತಾಬ್ಧಿ ಹಿ. ಪ್ರಾ. ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದೆ. ಹಂತ ಹಂತವಾಗಿಯೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ನುಡಿದರು.

ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. 380 ಸೇವಾ ಮತದಾರರಿಗೆ ಅಂಚೆ ಮತಪತ್ರವನ್ನು ಇಟಿಪಿಬಿಎಸ್ (ಇಲೆಕ್ಟ್ರಾನಿಕ್ ಮಾದರಿಯಲ್ಲಿ) ಕಳುಹಿಸಲಾಗಿದೆ. ಅವುಗಳ ಎಣಿಕೆ ಬಾರ್‌ಕೋಡ್‌ನ ಮೂಲಕ ನಡೆಯಲಿದೆ. ಉಳಿದಂತೆ 11,401 ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮೂಲಕ ಮತ ಪತ್ರಗಳನ್ನು ಕಳುಹಿಸಲಾಗಿದೆ. ಮೇ 15ರಂದು ಬೆಳಗ್ಗೆ 8 ಗಂಟೆಯವರೆಗೆ ಸ್ವೀಕೃತವಾಗುವ ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು.
ಎಣಿಕೆ ಪ್ರಕ್ರಿಯೆ ಆರಂಭವಾದ 30 ನಿಮಿಷಗಳ ನಂತರ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆ ನಡೆಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 1858 ಮತಗಟ್ಟೆಗಳಿದ್ದು, ಗರಿಷ್ಠ 18 ಎಣಿಕೆ ಸುತ್ತುಗಳು ನಡೆಯಲಿವೆ. ಮತ ಎಣಿಕೆಯ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್‌ಗೆ ನಿಷೇಧ

ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಚಲಾಯಿಸಲಾದ ಇವಿಎಂ/ವಿವಿ ಪ್ಯಾಟ್‌ಗಳ ಮೊದಲಾದ ಚುನಾವಣಾ ದಾಖಲೆಗಳನ್ನು ಇಡಲಾದ ಭದ್ರತಾ ಕೊಠಡಿಗಳಿರುವ ಮತ ಎಣಿಕೆ ಕೇಂದ್ರದ ಆವರಣದ 100 ಮೀ ವ್ಯಾಪ್ತಿಯೊಳಗೆ ಮೂರು ಹಂತದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಧಿಕೃತ ವ್ಯಕ್ತಿ, ವಾಹನಗಳು ಪ್ರವೇಶಿಸದಂತೆ ತಡೆ ಬೇಲಿಯನ್ನು ನಿರ್ಮಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮತ ಎಣಿಕೆಯ ಪ್ರವೇಶ ದ್ವಾರದ ಬಳಿ ಗೇಟು ನಿರ್ಮಿಸಿ ಅದನ್ನು ಹಾದು ಹೋಗುವ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಯಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿಯವರು ಹೊಂದಿರುವ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರಿಶೀಲಿಸಿ ಅನುಮತಿಸುವ ಬಗ್ಗೆ ಸ್ಥಳೀಯ ಪೊಲೀಸರನ್ನು ಕರ್ತವ್ಯದಲ್ಲಿರಿಸಲಾಗಿದೆ.

2ನೆ ಹಂತದ ಭದ್ರತೆ ಮತ ಎಣಿಕೆ ಆವರಣದ ಮದ್ಯದಲ್ಲಿ ಗೇಟು ನಿರ್ಮಿಸಿ ರಾಜ್ಯ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ಕರ್ತವ್ಯದಲ್ಲಿರಿಸಲಾಗಿದೆ. ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸುವ ವ್ಯಕ್ತಿಗಳು ಬೆಂಕಿ ಪೆಟ್ಟಿಗೆ, ಶಸ್ತ್ರಾಸ್ತ್ರ ಸೇರಿದಂತೆ ಪ್ರತಿಬಂಧಕ ವಸ್ತುಗಳನ್ನು ಒಯ್ಯುವಂತಿಲ್ಲ. ಈ ಬಗ್ಗೆ ತಪಾಸಣೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್ ಇತ್ಯಾದಿ ಇಲೆಕ್ಟ್ರಾನಿಕ್ ಉಪಕರಣ ಹಾಗೂ ಆಡಿಯೊ ವೀಡಿಯೊ ರೆಕಾರ್ಡ್‌ರ್‌ಗಳನ್ನು ನಿಷೇಧಿಸಲಾಗಿದೆ. 3ನೆ ಹಂತದ ಭದ್ರತೆಗಾಗಿ ಕೇಂದ್ರ ಶಸ್ತ್ರ ಸಜ್ಜಿತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯನ್ನು ಪ್ರವೇಶಿಸುವ ಸಿಬ್ಬಂದಿ, ಎಣಿಕೆ ಏಜೆಂಟರನ್ನು ತಪಾಸಣೆ ನಡೆಸಿ ಯಾವುದೇ ಅನಧಿಕೃತ ಉಪಕರಣ ಕೊಂಡೊಯ್ಯದಂತೆ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.

ವಾಹನ ಸಂಚಾರದಲ್ಲಿ ಬದಲಾವಣೆ
ಬೊಂದೇಲ್ ಎಂಜಿಸಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿರುವುದಾಗಿ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ತಿಳಿಸಿದರು.

ಬೊಂದೇಲ್ ಜಂಕ್ಷನ್‌ನಿಂದ ಈಶ್ವರಕಟ್ಟೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಲ್ಲಿ ಎರಡು ಆರ್‌ಎಎಫ್ ತುಕಡಿ, 6 ಕೆಎಸ್‌ಆರ್‌ಪಿ, 6 ಸಿಎಆರ್ ಮತ್ತು 100 ಮೊಬೈಲ್ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News