ಚುನಾವಣಾ ವ್ಯವಸ್ಥೆಯ ಲೋಪಗಳ ಬಗ್ಗೆ ಆಯೋಗಕ್ಕೆ ಪತ್ರ: ಯು.ಟಿ.ಖಾದರ್
ಮಂಗಳೂರು, ಮೇ 14: ಚುನಾವಣಾ ವ್ಯವಸ್ಥೆಯು ಮತ್ತಷ್ಟು ಪಾರದರ್ಶಕವಾಗಿ ರೂಪುಗೊಳ್ಳುವುದು ಅಗತ್ಯವಿದ್ದು, ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಕೆಲವೊಂದು ಲೋಪಗಳು ಇರುವ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕಪ್ಪು ಬಿಳುಪಿನ ವೋಟರ್ ಸ್ಲಿಪ್ ಆಧರಿಸಿ, ಆಯೋಗದ ಗುರುತಿನ ಚೀಟಿ ಆಥವಾ ಇತರ ಯಾವುದೇ ಗುರುತಿನ ಚೀಟಿ ಇಲ್ಲದೆ ಮತ ಚಲಾವಣೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವೋಟರ್ ಸ್ಲಿಪ್ ಇರುವ ಮಾಸಿದ ಕಪ್ಪು ಬಿಳುಪು ಫೋಟೊ ನೋಡಿ ಬಂದಿರುವ ವ್ಯಕ್ತಿ ನೈಜ ಮತದಾರನೇ ಎಂದು ನಿರ್ಧರಿಸುವುದು ಕಷ್ಟ. ಅಲ್ಲದೆ ವೋಟರ್ ಸ್ಲಿಪ್‌ನಲ್ಲಿ ಮನೆ ನಂಬರ್ ಕೂಡ ಇರುವುದಿಲ್ಲ. ಈ ವ್ಯವಸ್ಥೆ ನಕಲಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡುವ ಸಾಧ್ಯತೆ ಅಧಿಕ ಎಂದವರು ಅನಿಸಿಕೆ ವ್ಯಕ್ತ ಪಡಿಸಿದರು.
ವೋಟರ್ ಸ್ಲಿಪ್‌ಗಳನ್ನು ಪ್ರತೀ ಮನೆಗೆ ತಲುಪಿಸುವಲ್ಲಿ ಕೂಡ ಆಯೋಗ ವಿಫಲವಾಗಿದೆ. ಬಿಎಲ್‌ಒ ಗಳಿಗೆ ವೋಟರ್ ಸ್ಲಿಪ್ ಪ್ರತೀ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಲಾಗಿದೆ. ಅನೇಕ ಕಡೆ ಈ ಬಿಎಲ್‌ಒ ಗಳು ವೋಟರ್ ಸ್ಲಿಪ್ ಸ್ವತಃ ಮತದಾರನ ಮನೆಗಳಿಗೆ ತಲುಪಿಸದೆ ಈ ಜವಾಬ್ದಾರಿಯನ್ನು ಯೋವುದೋ ಒಂದು ಪಕ್ಷಕ್ಕೆ ಸೇರಿದ ಮುಖಂಡರಿಗೆ ವರ್ಗಾಯಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ವೋಟರ್ ಸ್ಲಿಪ್ ದುರುಪಯೋಗ ಸಾಧ್ಯತೆ ಹೆಚ್ಚು. ಮುಂದಿನ ಆಯೋಗ ಭರವಸೆ ನೀಡಿದಂತೆ ಆವಶ್ಯ ಉಳ್ಳವರಿಗೆ ಗಾಲಿ ಕುರ್ಚಿ ಕೂಡ ದೊರೆತ್ತಿಲ್ಲ. ಲೋಕಸಭಾ ಚುನಾವಣೆ ಮೊದಲು ಈ ವ್ಯವಸ್ಥೆ ಸರಿಪಡಿಸುವುದು ಅಗತ್ಯ ಎಂದವರು ಹೇಳಿದರು.
ಚುನಾವಣಾ ಆಯೋಗ ಈ ಬಾರಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಕೂಡ ಮರೆಯುವಂತಿಲ್ಲ. ಕೊನೆಯ ಹಂತದ ತನಕ ಕೂಡ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಒದಗಿಸಲಾಗಿತ್ತು ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯಲಿದೆ. ಮುಖ್ಯಮಂತ್ರಿ ಸ್ಥಾನ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸಹಿತ ರಾಜ್ಯದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಇದ್ದಾರೆ. ಕಳೆದ ಅವಧಿ ಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸಿದ್ದರಾಮಯ್ಯನವರು ಯಶಸ್ವಿಯಾಗಿ ಅಧಿಕಾರ ಪೂರ್ಣಾವಧಿ ನಡೆಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಳ್ಳಲಿದೆ. ಹಾಗೆ ನೋಡಿದರೆ ನನ್ನ ಕ್ಷೇತ್ರವೇ ಕಷ್ಟ ಇರಬಹುದು ಎಂದು ಅಭಿಪ್ರಾಯಪಟ್ಟರು. ಅಶ್ರಫ್ ಸ್ಪರ್ಧೆಯಿಂದ ಸಮಸ್ಯೆಯಾಯಿತೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎದುರಾಳಿ ಯಾರು ಎನ್ನುವುದು ನಮಗೆ ಮುಖ್ಯವೇ ಅಲ್ಲ ಎಂದರು.