ನೆಹರೂ ಆರೆಸ್ಸೆಸ್ ಶಾಖಾ ಸಭೆಯಲ್ಲಿ ಭಾಗವಹಿಸಿದ್ದರೆಂದು ಹೇಳಿದ ಫೋಟೋ ವೈರಲ್ ; ವಾಸ್ತವವೇನು ?

Update: 2018-05-14 12:01 GMT

ಹೊಸದಿಲ್ಲಿ,ಮೇ.14: ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಆರೆಸ್ಸೆಸ್ ಶಾಖಾ ಸಭೆಯೊಂದರಲ್ಲಿ ಭಾಗವಹಿಸಿದ್ದರೇ ? ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಅಭಿಮಾನಿಗಳ 'ಐ ಸಪೋರ್ಟ್ ದಾವಲ್' ಎಂಬ ಫೇಸ್ ಬುಕ್ ಪುಟದಲ್ಲಿನ ಪೋಸ್ಟ್ ಒಂದನ್ನು  ನಂಬುವುದಾದರೆ ಇದು ನಿಜ.

ಈ ಪುಟದಲ್ಲಿ ನೆಹರೂ ಅವರ ಫೋಟೋ ಒಂದನ್ನು ಪೋಸ್ಟ್ ಮಾಡಿ "ಈ ಫೋಟೋ ಬಹಳ ಕಷ್ಟದಿಂದ ದೊರಕಿದೆ. ಆರೆಸ್ಸೆಸ್ ಶಾಖಾವೊಂದರಲ್ಲಿ ನೆಹರೂಜಿ ನಿಂತ ಫೋಟೋ/ ನೆಹರೂಜಿ ಕೂಡ ಕೇಸರಿ ಉಗ್ರರಾಗಿದ್ದರೇ?'' ಎಂದು ಅದಕ್ಕೆ ಶೀರ್ಷಿಕೆ ನೀಡಲಾಗಿದೆ.

ಈ ಫೋಟೋದಲ್ಲಿ ನೆಹರೂ ಅವರು ಆರೆಸ್ಸೆಸ್ ಸಮವಸ್ತ್ರದಂತೆಯೇ ಶಾಟ್ರ್ಸ್, ಟೋಪಿ ಹಾಗೂ ಕೈಯ್ಯಲ್ಲಿ ಬೆತ್ತ ಹಿಡಿದಿದ್ದಾರೆ. ಮೇ 11ರಂದು ಅಪ್ ಲೋಡ್ ಮಾಡಲ್ಪಟ್ಟ ಈ ಪೋಸ್ಟ್ ಇಲ್ಲಿಯ ತನಕ 6800ಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಇದೇ ಫೋಟೋವನ್ನು ಆರೆಸ್ಸೆಸ್ ಸ್ವಯಂಸೇವಕ್ ಫ್ಯಾನ್ಸ್ ಪುಟದಲ್ಲೂ ಪೋಸ್ಟ್ ಮಾಡಲಾಗಿದ್ದು ಹೀಗೆಂದು ಬರೆಯಲಾಗಿದೆ "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆರೆಸ್ಸೆಸ್ಸನ್ನು ದ್ವೇಷಿಸುತ್ತದೆ. ಆದರೆ ಪ್ಲೇಬಾಯ್ ನೆಹರೂ  ಕೂಡ ಒಂದು ಕಾಲದಲ್ಲಿ ಶಾಖಾದಲ್ಲಿದ್ದರು. ಆದರೆ ಇಲ್ಲಿ ಅವರಿಗೆ ನಿಲ್ಲಲಾಗಲಿಲ್ಲ. ಚಾಚಾ ಅವರಿಗೆ ಇಲ್ಲಿನ ನಿಯಮಗಳು ಬಹಳ ಕಠಿಣವಾಗಿ ಪರಿಣಮಿಸಿತ್ತು.''

ಸತ್ಯಾಂಶವೇನು ?

ಆ ಫೋಟೋದಲ್ಲಿ ಕಾಣಿಸುತ್ತಿರುವವರು ನೆಹರೂ. ಆದರೆ ಅದು ಆರೆಸ್ಸೆಸ್ ಶಾಖಾ ಆಗಿರಲಿಲ್ಲ. ಈ ಫೋಟೋವನ್ನು1939ರಲ್ಲಿ ಉತ್ತರ ಪ್ರದೇಶದ ನೈನಿಯಲ್ಲಿ ತೆಗೆಯಲಾಗಿತ್ತು. ಚಿತ್ರದಲ್ಲಿ  ನೆಹರೂ ಅವರು ಬಿಳಿ ಟೋಪಿ ಧರಿಸಿರುವುದು ಸ್ಪಷ್ಟ. ಆದರೆ ಆರೆಸ್ಸೆಸ್ 1925ರಲ್ಲಿ ಜಾರಿಗೊಳಿಸಿದ ಸಮವಸ್ತ್ರ ಸಂಹಿತೆಯಲ್ಲಿ ಅದರ ಟೋಪಿ ಕಪ್ಪು ಬಣ್ಣದ್ದಾಗಿದೆ.

ನ್ಯೂಸ್ 18 ವಾಹಿನಿ ಈ ಫೋಟೋ ಬಗ್ಗೆ ಡಿಸೆಂಬರ್ 2017ರಲ್ಲಿಯೇ ಮಾಹಿತಿ ಸಂಗ್ರಹಿಸಿದ್ದು ಅದರ ಪ್ರಕಾರ ನೆಹರೂ ಅವರು ಸೇವಾ ದಳ ಸಭೆಯೊಂದರಲ್ಲಿ ಭಾಗವಹಿಸಿದ್ದರು.

ಇದು ಕಾಂಗ್ರೆಸ್ಸಿನ ತಳಮಟ್ಟದ ಸಂಘಟನೆಯಾಗಿದೆ. 1924ರಲ್ಲಿ ಸ್ಥಾಪಿತವಾಗಿದ್ದ ಹಿಂದುಸ್ತಾನಿ ಸೇವಾ ದಳ ಬ್ರಿಟಿಷರ ವಿರುದ್ಧ ಹೋರಾಡುವ ಉದ್ದೇಶ ಹೊಂದಿತ್ತು. ನೆಹರೂ ಅವರು ಸೇವಾ ದಳ ಸಮವಸ್ತ್ರ ಧರಿಸಿರುವ ಹಲವಾರು ಚಿತ್ರಗಳು ಅಂತರ್ಜಾಲದಲ್ಲಿ ಲಭ್ಯವಿವೆ.

ಕೃಪೆ :altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News