×
Ad

ಫಲಿಮಾರಿನಲ್ಲಿ ಕುಂಬಾರಿಕೆ ಕಲಾ ಶಿಬಿರ: ಉತ್ಸಾಹದಲ್ಲಿ ಪಾಲ್ಗೊಂಡ ಮಹಿಳೆಯರು

Update: 2018-05-14 21:27 IST

ಪಡುಬಿದ್ರಿ, ಮೇ 14: ಮಣ್ಣಿನ ಮಡಿಕೆ, ಪಾತ್ರೆಗಳು ಇಂದು ನಶಿಸಿಹೋಗುತ್ತಿದೆ. ಆದರೆ ಈ ನಶಿಸಿ ಹೋಗುತ್ತಿರುವ ನೈಸರ್ಗಿಕ ಮಣ್ಣಿನ ಮಡಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಲಿಮಾರಿನ ಚಿತ್ರಾಲಯ ಕಲಾ ಗ್ಯಾಲರಿಯಲ್ಲಿ ಸೋಮವಾರ ಕುಂಬಾರಿಕೆ ಶಿಬಿರವನ್ನು ಸೋಮವಾರ ಆಯೋಜಿಸಿತು.

ಕಲಾವಿದ ವೆಂಕಿ ಪಲಿಮಾರು ಅವರಿಂದ ಕುಂಬಾರಿಕೆ ಕಲೆಯ ಬಗ್ಗೆ ತರಬೇತಿ ಪಡೆದರು. ಅಲ್ಲದೆ ಶಿಬಿರದಲ್ಲಿ ಪಾಲ್ಗೊಂಡ ಕೆಲ ಮಕ್ಕಳು ರಚಿಸಿದ ತರಹೇವಾರಿ ಟೆರಕೋಟ ಕಲಾಕೃತಿಗನ್ನು ತಯಾರಿಸಿ ತಾವೇನು ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಶಿಬಿರ ನಡೆಯಿತು. ಉಡುಪಿ, ಮಣಿಪಾಲ, ಕುಂದಾಪುರ ಮತ್ತಿತರ ಕಡೆಯ ಆಸಕ್ತ ಮಹಿಳೆಯರು ಈ ಶಿಬಿರದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡು ನೈಸರ್ಗಿಕವಾಗಿ ಮಣ್ಣಿನೊಂದಿಗೆ ಬೆರೆತರು.

ಶಿಬಿರದಲ್ಲಿ ಮಹಿಳೆಯರು ಬಾಲಕಿಯರು ಸೇರಿದಂತೆ ಸುಮಾರು 20ಕ್ಕೂ ಅದಿಕ ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಒಂದೆರಡು ಜನ ಉದ್ಯೋಗಸ್ತರಾದರೆ ಉಳಿದವರು ಗೃಹಿಣಿಯರಾಗಿದ್ದುದು ವಿಶೇಷ. ಶಿಬಿರದಲ್ಲಿ ಮಣ್ಣಿನ ಹರಿವಾಣ, ಊಟದ ತಟ್ಟೆ, ಬಟ್ಟಲು, ನೀರು ತುಂಬಿಸುವ ಹೂಜಿ, ಬಗೆ ಬಗೆಯ ಹೂದಾನಿಗಳನ್ನು ಮಾಡುವ ಮೂಲಕ ಮಹಿಳೆಯರು ತಮ್ಮ ಕೈಚಳಕ ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಫಲಿಮಾರು ಗ್ರಾಮ ಪಂಚಾಯಿತಿ ಸದಸ್ಯೆ ಗಾಯಾತ್ರಿ ಪ್ರಭು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗ ತರಬೇತುದಾರೆ ಅಮಿತಾ ಭಟ್, ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಗಳ ಬಳಕೆಯಿಂದ ನಮ್ಮ ಹಿರಿಯರು ಆರೋಗ್ಯವಂತರಾಗಿದ್ದರು. ಇಂದು ಸ್ಟೀಲ್, ಅಲ್ಯುಮೀನಿಯಂ ಮತ್ತಿತರ ಕೃತಕ ವಸ್ತುಗಳಿಂದ ತಯಾರಿಸಿದ ಪಾತ್ರೆಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಯುವಪೀಳಿಗೆಯು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಜನರು ಮಣ್ಣಿನ ಪಾತ್ರೆಗಳ ಬಳಕೆಯನ್ನು ಮಾಡಬೇಕು. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. 

ಉಮೇಶ್ ಕಾಮತ್, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಸುಮಾ ಪುತ್ರನ್, ಶಕುಂತಲ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News