ತಿಂಗಳಾಡಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಪೂಜೆ ಮಹೋತ್ಸವ
ಪುತ್ತೂರು, ಮೇ 14: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಗಾಂನಗರ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಮಾರಿಪೂಜೆ ಮಹೋತ್ಸವವು ಮೇ 14 ರಿಂದ ಆರಂಭಗೊಂಡು ಮೇ16 ರತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮೇ14 ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧಿ ಕಲಶ ಬಳಿಕ ಅನ್ನಸಂತರ್ಪಣೆ, ಸಂಜೆ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ಸಿದ್ಯಾಳರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಭಂಡಾರ ತೆಗೆಯುವುದು, ಭಂಡಾರ ಶುದ್ಧಿಗೊಳಿಸುವುದು, ಭಂಡಾರ ಉತ್ಸವ ಬಯಲಿದೆ ಕೊಂಡೊಯ್ಯುವುದು ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸವಿತಾ ಮ್ಯೂಸಿಕ್ ಪುತ್ತೂರು ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ದೇವಿಯ ಗುಡಿ ಪ್ರತಿಷ್ಠಾಪಿಸುವುದು ನಡೆದು ಗುಳಿಗ, ಪಂಜುರ್ಲಿ, ಕಲ್ಲುರ್ಟಿ, ಶನಿಗುಳಿಗ, ಕಾಳಭೈರವ ದೈವಗಳ ದರ್ಶನ ಮತ್ತು ತಂಬಿಲ ಸೇವೆ ನಡೆಯಲಿದೆ.
ಮೇ15 ರಂದು ಸೂರ್ಯೋದಯಕ್ಕೆ ಮೊದಲು ಮಾರಿ ಕಡಿಯುವುದು, ಮಧ್ಯಾಹ್ನ ಅಮ್ಮನವರ ದರ್ಶನ ಮತ್ತು ಇತರ ದೈವಗಳ ದರ್ಶನ, ಮಹಾಪೂಜೆ, ಹರಿಕೆ ಕಾಣಿಕೆ ಸ್ವೀಕಾರ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇವಾಲಯಕ್ಕೆ ಭಂಡಾರ ಕೊಂಡೊಯ್ಯುವ ಕಾರ್ಯಕ್ರಮ ನಡೆಯಲಿದೆ.
ಮೇ16 ರಂದು ಸೂರ್ಯೋದಕ್ಕೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆ ನಡೆಯಲಿದೆ. ಭಕ್ತಾಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಮಾದಿಗ ತಿಳಿಸಿದ್ದಾರೆ.