ದ. ಆಫ್ರಿಕದಲ್ಲಿ ಹಿಂದೂ-ಮುಸ್ಲಿಮ್ ಏಕತಾ ಹಾಡುಗಾರ ರಮೇಶ್ ಹಸನ್ ಇನ್ನಿಲ್ಲ
Update: 2018-05-14 23:25 IST
ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಮೇ 14: ತನ್ನ ಸಂಗೀತದ ಮೂಲಕ ದಕ್ಷಿಣ ಆಫ್ರಿಕದಲ್ಲಿ ಹಿಂದೂ-ಮುಸ್ಲಿಮ್ ಸಾಮರಸ್ಯಕ್ಕಾಗಿ ಶ್ರಮಿಸಿದ್ದ ಸಂಗೀತಗಾರ ಹಾಗೂ ಗಾಯಕ ರಮೇಶ್ ಹಸನ್‌ರ ನಿಧನಕ್ಕೆ ದಕ್ಷಿಣ ಆಫ್ರಿಕದ ಭಾರತೀಯ ಸಮುದಾಯ ಕಂಬನಿ ಮಿಡಿದಿದೆ.
ದಕ್ಷಿಣ ಆಫ್ರಿಕದಲ್ಲಿ ಹಿಂದೂ-ಮುಸ್ಲಿಮ್ ಏಕತೆಯ ಸಂಕೇತ ಎಂಬುದಾಗಿ ಪರಿಗಣಿಸಲಾದ 73 ವರ್ಷದ ಹಸನ್ ಶನಿವಾರ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.
ಹಿಂದೂ-ಮುಸ್ಲಿಮ್ ಏಕತೆಗಾಗಿ ಅವರು ತನ್ನ ಮುಸ್ಲಿಮ್ ಹೆಸರು ಹಸನ್ ಸಾಯಿಬ್‌ನ್ನು ರಮೇಶ್ ಹಸನ್ ಎಂಬುದಾಗಿ ಬದಲಾಯಿಸಿದ್ದರು.
ಅವರು 14ನೇ ವಯಸ್ಸಿನಲ್ಲೇ ಹಾಡಲು ಆರಂಭಿಸಿದ್ದರು. ಅವರು ಎಲ್ವಿಸ್ ಪ್ರೆಸ್ಲಿ ಮತ್ತು ಕ್ಲಿಫ್ ರಿಚರ್ಡ್ ಮುಂತಾದ ಗಾಯಕರ ಪ್ರಸಿದ್ಧ ಹಾಡುಗಳನ್ನು ಹಾಡಿದ್ದರು. ಬಳಿಕ ಅವರು ಹಿಂದಿ, ತಮಿಳು, ತೆಲುಗು, ಗುಜರಾತಿ, ಉರ್ದು ಹಾಗೂ ಆಫ್ರಿಕದ ದೇಶೀ ಭಾಷೆಗಳಾದ ಆಫ್ರಿಕಾನ್ಸ್, ಝುಲು ಮತ್ತು ಸೆಸೊತೊ ಭಾಷೆಗಳ ಹಾಡುಗಳನ್ನೂ ಹಾಡಿದ್ದರು.