×
Ad

ಯು.ಟಿ. ಖಾದರ್ ಗೆಲುವು: ಉಳ್ಳಾಲ, ಮುಡಿಪು ನಲ್ಲಿ ರೋಡ್ ಶೋ

Update: 2018-05-15 23:31 IST

ಉಳ್ಳಾಲ, ಮೇ 16: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಯು.ಟಿ.ಖಾದರ್ ಮಂಗಳವಾರ ಸಂಜೆ ಕಾರ್ಯ ಕರ್ತರೊಂದಿಗೆ ಉಳ್ಳಾಲ ಮತ್ತು ಮುಡಿಪು ಪ್ರದೇಶ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದರು.

ಯು.ಟಿ.ಖಾದರ್ ಅವರು ಮಂಗಳೂರಿನಲ್ಲಿ ಮತ ಎಣಿಕೆಯಾದ ಬಳಿಕ ಪಕ್ಷದ ಹಿರಿಯರೊಂದಿಗೆ ಭಾಗವಹಿಸಿ ಬಳಿಕ ಕಂಕನಾಡಿಯಲ್ಲಿರುವ ಅವರ ನಿವಾಸದಿಂದ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು. ತೊಕ್ಕೊಟ್ಟು ಉಳ್ಳಾಲ ಮಾರ್ಗವಾಗಿ ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ತನ್ನ ತಂದೆ ತಾಯಿಯ ಖಬರ್‌ಗೆ ಭೇಟಿ ನೀಡಿ ಬಳಿಕ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ, ಮೊಗವೀರಪಟ್ಣ, ಕೋಟೆಪುರ ಮಾರ್ಗವಾಗಿ ಉಳ್ಳಾಲ ಉಳಿಯ, ಸಂತ ಸೆಬಾಸ್ತಿಯನ್ನರ ಚರ್ಚ್‌ಗೆ ಭೇಟಿ ನೀಡಿದರು. ಬಳಿಕ ಮುಡಿಪು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಂಜನಾಡಿ, ಮುಡಿಪುವಿನಲ್ಲಿ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಈ ಬಾರಿ ವಿಜಯೋತ್ಸವ ಮತ್ತು ಪಟಾಕಿ ಸಿಡಿಸಿ ಸಂಭ್ರವನ್ನು ಆಚರಿಸುವುದಿಲ್ಲ. ಕ್ಷೇತ್ರದಲ್ಲಿ ಎಷ್ಟೇ ವಿರೋಧವಿದ್ದರೂ ಈ ವಿರೋಧಕ್ಕೆ ಕಾರಣ ಏನು ಎಂಬುವುದನ್ನು ಮುಂದಿನ ಬೂತ್ ಮಟ್ಟದಲ್ಲಿ ಚರ್ಚೆ ನಡೆಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುತ್ತೇನೆ. ನನ್ನನ್ನು ಚುನಾವಣೆ ಸಂದರ್ಭದಲ್ಲಿ ವಿರೋಧಿಸಿದವರನ್ನು ಒಟ್ಟಾಗಿ ಸೇರಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News