×
Ad

ಇವಿಎಂ ಯಂತ್ರದ ಬಗ್ಗೆ ಸಂಶಯವಿದೆ: ರಮಾನಾಥ ರೈ

Update: 2018-05-15 23:59 IST

ಬಂಟ್ವಾಳ, ಮೇ 15: ಇವಿಎಂ ಯಂತ್ರದ ಬಗ್ಗೆ ಕೆಲವೊಂದು ಸಂಶಯವಿದೆ. ಈ ಬಗ್ಗೆ ಆರ್‌ಒ ಸಹಿತ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದು, ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಬಿ.ರಮಾನಾಥ ರೈ ತಿಳಿಸಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣಾಯಲ್ಲಿ ಜಿಲ್ಲೆಯ ಅನಿರೀಕ್ಷಿತ ಫಲಿತಾಂಶದ ಹಿನ್ನೆಲೆಯಲ್ಲಿ "ವಾರ್ತಾಭಾರತಿ" ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾನು ಇವಿಎಂ ಯಂತ್ರದದ ಕೆಲವೊಂದು ದೋಷಗಳ ಬಗ್ಗೆಯೂ ಈ ಮೊದಲು ಉಲ್ಲೇಖ ಮಾಡಿದ್ದೆ. ಕಾಂಗ್ರೆಸ್‌ಗೆ ಮುನ್ನಡೆ ಸಿಗಬೇಕಾಗಿದ್ದ ಬೂತ್‌ಗಳಲ್ಲಿ ಸರಿಯಾದ ಫಲಿತಾಂಶ ಲಭ್ಯವಾಗಿಲ್ಲ ಹಾಗೂ ಇನ್ನಿತರ ಗೊಂದಲಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದರು. 

ಶಾಸಕ, ಸಚಿವನಾಗಿ ಸಾರ್ವಜನಿಕ ಬದುಕಿನಲ್ಲಿ ಬಹಳಷ್ಟು ಕೆಲಸ ಮಾಡುತ್ತಾ ಬಂದಿದ್ದೇನೆ. ಅಭಿವೃದ್ಧಿ ಕೆಲಸಗಳನ್ನು ಮಾಡುವವರನ್ನು ಗುರಿಯಾಗಿಸಿ ಕೊಂಡು ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮೂಲಕ ಬೆದರಿಸುವ ತಂತ್ರವನ್ನು ಮಾಡಿದೆ. 60 ವರ್ಷದ ರಾಜಕೀಯ ಇತಿಹಾಸದಲ್ಲಿ ತಾನು ಎಂದೂ ನೋಡಲಿಲ್ಲ ಎಂದು ದೂರಿದರು.

ತಾನು ಚುನಾವಣೆಯಲ್ಲಿ 8ನೆ ಬಾರಿ ಸ್ಪರ್ಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಯಾವ ರೀತಿಯಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ ಎಂಬುವುದು ಜನರಿಗೆ ತಿಳಿದಿದೆ ಎಂದರು.

ಇನ್ನೂ ಕೂಡಾ ಜನರ ನಡುವೆ ಒಡನಾಟವನ್ನು ಹೊಂದಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತೇನೆ. ಸಾಮಾಜಿಕ ಸೇವೆಯ ಜೊತೆಗೆ ಸಾಮರಸ್ಯದ ನೆಲೆಯನ್ನು ಬಲಪಡಿಸಲು ತಮ್ಮ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಪಕ್ಷದ ಬಲ ವರ್ಧನೆಗಾಗಿ ಮತ್ತಷ್ಟು ಶ್ರಮಿಸುತ್ತೇನೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಗೆಲುವು ಸಾಧಿಸುವ ನೀರೀಕ್ಷೆಯಿತ್ತು. ಕ್ಷೇತ್ರದಲ್ಲಿ ಸುಮಾರು 58 ಸಾವಿರ ಅಲ್ಪ ಸಂಖ್ಯಾತರ ಮತಗಳು ಹಾಗೂ ಇನ್ನಿತರ 40 ಸಾವಿರ ಮತಗಳು ಸೇರಿ ಗೆಲುವಿನ ಲೆಕ್ಕಾಚಾರವನ್ನು ಮಾಡಿದ್ದೆವು. ಆದರೆ, ಇವಿಎಂನ ಎಡವಟ್ಟಿನಿಂದ ಸರಿಯಾದ ಫಲಿತಾಂಶ ಲಭ್ಯವಾಗಲಿಲ್ಲ. ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಆದ ಮತದಾನದ ಶೇಕಡವಾರು ಕೂಡಾ ಸರಿಯಾಗಿಲ್ಲ ಎಂದು ರೈ ಅವರ ಆಪ್ತರೊಬ್ಬರು ಅಭಿಪ್ರಾಯಪಡುತ್ತಾರೆ.
ಬೂತ್‌ಗಳ ಕ್ರಮಸಂಖ್ಯೆ ಹಾಗೂ ಇವಿಎಂ ಯಂತ್ರದ ಕ್ರಮಸಂಖ್ಯೆಯಲ್ಲಿ ಬದಲಾವಣೆಯಾಗಿದೆ. ಅಲ್ಲದೆ, ಕ್ಷೇತ್ರದ ಕೆಲವೊಂದು ಮತಗಟ್ಟೆಗಳ ಇವಿಎಂ ಯಂತ್ರದಲ್ಲಿ ಪೋಲಿಂಗ್ ಸ್ಲಿಪ್‌ಅನ್ನು ಅಳವಡಿಕೆ ಮಾಡಿಲ್ಲ. ಇವಿಎಂ ಯಂತ್ರದ ಸಂಖ್ಯೆ ಹಾಗೂ ಚುನಾವಣಾ ಪಟ್ಟಿಯಲ್ಲಿ ನಮೂದು ಮಾಡಿರುವ ಸಂಖ್ಯೆಯಲ್ಲಿಯೂ ಬದಲಾವಣೆಯಾಗಿದೆ. ಅಲ್ಲದೆ, ಕಾಂಗ್ರೆಸ್ ಮುನ್ನಡೆ ಸಾಧಿಸಬೇಕಾದ ಬೂತ್‌ನಲ್ಲಿಯೂ ಸರಿಯಾದ ಫಲಿತಾಂಶ ಬಂದಿಲ್ಲ. ಅಲ್ಲದೆ, ಕೆಲವೊಂದು ಬೂತ್‌ಗಳ ಇವಿಎಂ ಯಂತ್ರ ಹ್ಯಾಕ್ ಆಗಿರುವ ಸಂಶಯವೂ ಇದೆ. ಇವಿಎಂ ಆಕ್ಷೇಪ ವ್ಯಕ್ತಪಡಿಸಿ ಯು.ಟಿ ಖಾದರ್ ಅವರನ್ನು ಬಿಟ್ಟು ಉಳಿದ ಕಾಂಗ್ರೆಸ್ ಅಭ್ಯರ್ಥಿಗಳು ಆರ್‌ಒ ಅವರಿಗೆ ದೂರು ನೀಡಲಾಗಿದೆ ಎಂದು ರೈ ಅವರ ವಕೀಲ ಚಿದಾನಂದ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News