ಮೂರು ತಿಂಗಳಲ್ಲಿ 58.3 ಕೋಟಿ ನಕಲಿ ಖಾತೆಗಳನ್ನು ರದ್ದುಗೊಳಿಸಿದ ಫೇಸ್ ಬುಕ್

Update: 2018-05-16 07:44 GMT

ಪ್ಯಾರಿಸ್,ಮೇ.16 : ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಫೇಸ್ ಬುಕ್ ಒಟ್ಟು 58.3 ಕೋಟಿ ನಕಲಿ ಖಾತೆಗಳನ್ನು ರದ್ದುಗೊಳಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಫೇಸ್ ಬಕ್ ನಲ್ಲಿ ಕಾಣಿಸುವ ಲೈಂಗಿಕತೆ ಪ್ರಚೋದಿಸುವ, ಹಿಂಸಾತ್ಮಕ  ಚಿತ್ರಗಳು, ಉಗ್ರರ ಪ್ರಚಾರ ತಂತ್ರ ಹಾಗೂ ದ್ವೇಷಯುಕ್ತ ಭಾಷಣಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸಂಸ್ಥೆ ವಿವರಿಸಿದೆ.

ಕ್ಯಾಂಬ್ರಿಡ್ಜ್ ಅನಾಲಿಟಾ ಡಾಟಾ  ಹಗರಣದ ನಂತರ ಹೆಚ್ಚಿನ ಪಾರದರ್ಶಕತೆಯತ್ತ ಒತ್ತು ನೀಡುತ್ತಿರುವ ಫೇಸ್ ಬುಕ್ ಮೇಲಿನ ರದ್ದುಗೊಳಿಸಲಾದ ನಕಲಿ ಖಾತೆಗಳ ಹೊರತಾಗಿ ಪ್ರತಿ ದಿನ ನಕಲಿ ಖಾತೆಗಳನ್ನು ತೆರೆಯಲು ನಡೆಸಲಾಗುವ  ಕೋಟಿಗಟ್ಟಲೆ ಯತ್ನಗಳನ್ನೂ ತಡೆಯಲಾಗುತ್ತಿದೆ ಎಂದಿದೆ. ಇಷ್ಟೆಲ್ಲಾ ಕ್ರಮ ಕೈಗೊಂಡ ಹೊರತಾಗಿಯೂ ಸದ್ಯ ಸಕ್ರಿಯವಾಗಿರುವ ಫೇಸ್ ಬುಕ್ ಖಾತೆಗಳ ಪೈಕಿ ಶೇ 3ರಿಂದ ಶೇ 4ರಷ್ಟು ಖಾತೆಗಳು ನಕಲಿಯಾಗಿವೆ ಎಂದು ಅದು ಹೇಳಿದೆ.

ಸ್ಪ್ಯಾಮ್ ಗಳನ್ನು ಶೇ 100ರಷ್ಟು ಪತ್ತೆ ಹಚ್ಚಲಾಗುತ್ತಿದೆ ಹಾಗೂ 83.7 ಕೋಟಿ ಪೋಸ್ಟ್ ಗಳನ್ನು ಸ್ಪ್ಯಾಮ್ ಎಂಬ ಕಾರಣಕ್ಕೆ ಮೇಲೆ ತಿಳಿಸಲಾದ ಅವಧಿಯಲ್ಲಿ  ತೆಗೆದು ಹಾಕಲಾಗಿದೆ ಎಂದು ಸಂಸ್ಥೆ ಹೇಳಿದೆ.

ಆಕ್ಷೇಪಾರ್ಹ ಚಿತ್ರಗಳು, ಭಾಷಣಗಳು ಅಥವಾ ಉಗ್ರ ಪ್ರಚಾರಕ್ಕೆ ಸಂಬಂಧಿಸಿದಂತೆ ಸುಮಾರು 3 ಕೋಟಿ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಲಾಗಿದೆ. ಕೃತಕ ಬುದ್ಧಿಮತೆ ಉಪಯೋಗಿಸುವ ಸುಧಾರಿತ ತಂತ್ರಜ್ಞಾನದಿಂದ  ಫೇಸ್ಬುಕ್ 34 ಲಕ್ಷ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕ್ರಮ ಕೈಗೊಳ್ಳುವುದು ಸಾಧ್ಯವಾಗಿದೆ ಹಾಗೂ ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಕ್ರಮ ಎದುರಿಸಿದ ಪೋಸ್ಟ್ ಗಳಿಗಿಂತ ಮೂರು ಪಟ್ಟು ಅಧಿಕವಾಗಿದೆ ಎಂದು ತಿಳಿಸಿದೆ.

ಶೇ 85.6 ಪ್ರಕರಣಗಳಲ್ಲಿ  ಬಳಕೆದಾರರು ಹೇಳುವ ಮುನ್ನವೇ ಆಕ್ಷೇಪಾರ್ಹ ಚಿತ್ರಗಳನ್ನು ಫೇಸ್ ಬುಕ್ ಗುರುತಿಸಿದೆ ಹಾಗೂ ಖಾಸಗಿ ಬಳಕೆದಾರರ ಡಾಟಾ ದುರ್ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಸುಮಾರು 200 ಆ್ಯಪ್ ಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ತೀವ್ರಗಾಮಿ ಪ್ರಚಾರಕ್ಕೆ ಸಂಬಂಧಿಸಿದ 19 ಲಕ್ಷ ಪೋಸ್ಟ್ ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದ್ದು ಇದು ಕಳೆದ ವರ್ಷ ಕ್ರಮ ಕೈಗೊಳ್ಳಲಾದ ಪೋಸ್ಟ್ ಗಳಿಗಿಂತ ಶೇ 73ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ 25 ಲಕ್ಷ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪೋಸ್ಟ್ ಗಳ ವಿರುದ್ಧ ಕೂಡ ಕ್ರಮವನ್ನು ಫೇಸ್ ಬುಕ್ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News