ಇನ್ನು ಈ ರಾಜ್ಯದ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವಾಗ ವಿದ್ಯಾರ್ಥಿಗಳು 'ಜೈ ಹಿಂದ್' ಎನ್ನಬೇಕು

Update: 2018-05-16 10:03 GMT

ಭೋಪಾಲ್,ಮೇ.16 : ಮಧ್ಯ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವಾಗ ವಿದ್ಯಾರ್ಥಿಗಳು ಇನ್ನು ಮುಂದೆ 'ಯಸ್ ಟೀಚರ್, ಯಸ್ ಸರ್' ಹೇಳುವ ಹಾಗಿಲ್ಲ, ಬದಲಾಗಿ ಕಡ್ಡಾಯವಾಗಿ  'ಜೈ ಹಿಂದ್' ಹೇಳಬೇಕೆಂದು ಅಲ್ಲಿನ ಬಿಜೆಪಿ ಸರಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ.

'ಯಸ್ ಸರ್, ಯಸ್ ಟೀಚರ್' ಎಂದು ಹೇಳುವುದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡುವುದಿಲ್ಲ,'' ಎಂದು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ರಾಜ್ಯದ ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದರು. ರಾಜ್ಯದ ಎಲ್ಲಾ 1.22 ಲಕ್ಷ ಸರಕಾರಿ ಶಾಲೆಗಳಲ್ಲಿ ಈ ಜೈ ಹಿಂದ್ ನಿಯಮ ಜಾರಿಗೊಳಿಸಲಾಗುವುದು ಹಾಗೂ ಖಾಸಗಿ ಶಾಲೆಗಳಿಗೂ ಇದೇ ಪದ್ಧತಿ ಅನುಸರಿಸುವ ಆಯ್ಕೆ ನೀಡಲಾಗುವುದು ಎಂದರು.ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಈ ಹೊಸ ನಿಯಮವನ್ನು ಪ್ರಾಯೋಗಿಕ ನೆಲೆಯಲ್ಲಿ ಸತ್ನಾ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿತ್ತು.

ಸರಕಾರದ ಆದೇಶವನ್ನು ಕಾಂಗ್ರೆಸ್ ನಾಯಕ ಕೆ ಕೆ ಮಿಶ್ರಾ ಟೀಕಿಸಿದ್ದಾರೆ. "ಯಾರ ಮೇಲೂ ದೇಶಭಕ್ತಿಯನ್ನು ಹೇರಲು ಸಾಧ್ಯವಿಲ್ಲ. ಸರಕಾರ ಮೊದಲು ಶಿಕ್ಷಣದ ಗುಣಮಟ್ಟ ಸುಧಾರಿಸುವ ಕುರಿತು ಯೋಚಿಸಬೇಕಿದೆ ಹಾಗೂ ಸರಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕಿದೆ'' ಎಂದು ಅವರು ಹೇಳಿದ್ದಾರೆ. ಆದರೆ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಸರಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಎಲ್ಲಾ ಶಾಲೆಗಳಲ್ಲಿ ಪ್ರತಿ ದಿನ ತ್ರಿವರ್ಣ ಧ್ವಜ ಹಾರಿಸುವಂತೆ ಹಾಗೂ ರಾಷ್ಟ್ರಗೀತೆ ಕಡ್ಡಾಯವಾಗಿ ನುಡಿಸುವಂತೆ ಅಲ್ಲಿನ  ಸರಕಾರ ಈ ಹಿಂದೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News