ಗಾಝಾದಲ್ಲಿ ಇಸ್ರೇಲಿ ಹತ್ಯಾಕಾಂಡ: ಪಿಎಫ್‌ಐ ಖಂಡನೆ

Update: 2018-05-16 12:33 GMT

ಮಂಗಳೂರು, ಮೇ 16: ಗಾಝಾದಲ್ಲಿ ಇಸ್ರೇಲಿ ಸೇನೆಯು ಫೆಲೆಸ್ತೀನ್ ಜನರ ವಿರುದ್ಧ ನಡೆಸುತ್ತಿರುವ ಕ್ರೂರ ಹಿಂಸೆಯನ್ನು ಪಿಎಫ್‌ಐ ಅಧ್ಯಕ್ಷ ಇ. ಅಬೂಬಕರ್ ಹೇಳಿಕೆಯೊಂದರಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಮುಗ್ಧ ಫೆಲೆಸ್ತೀನಿಯರನ್ನು ಸಾಮೂಹಿಕ ಹತ್ಯೆಗೈಯ್ಯಲಾಗುತ್ತಿದೆಯಲ್ಲದೆ ಅವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಈ ಮಧ್ಯೆ ಅಮೆರಿಕವು ಹಲವು ದಶಕಗಳಿಂದ ಇಸ್ರೇಲ್‌ಗೆ ಆರ್ಥಿಕ ಹಾಗೂ ಸೇನಾ ನೆರವನ್ನು ನೀಡುತ್ತಾ ಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಭಟಿಸಲು ಗಾಝಾದಲ್ಲಿ ಒಟ್ಟುಗೂಡಿದಂತಹ ಫೆಲೆಸ್ತೀನಿಯರ ಮೇಲೆ ಇಸ್ರೇಲಿ ಸೈನ್ಯವು ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ. ಸುಮಾರು 2,000 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಕಾರರಿಂದ ಇಸ್ರೇಲ್‌ಗೆ ಯಾವುದೇ ನಷ್ಟ ಸಂಭವಿಸಿಲ್ಲದಿದ್ದರೂ ಎಂದಿನಂತೆ ಈ ಬಾರಿ ಕೂಡ ಇಸ್ರೇಲ್ ಸ್ವರಕ್ಷಣೆ ಎಂದು ಕರೆಯುವ ಮೂಲಕ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದೆ.

ವಾಸ್ತವದಲ್ಲಿ ಇಸ್ರೇಲ್, ಸಹಿಷ್ಣು ಫೆಲೆಸ್ತೀನಿಯರ ಯಾವುದೇ ಹೋರಾಟಗಳನ್ನು ಸಹಿಸುವುದಿಲ್ಲ ಹಾಗೂ ತಾನು ನಿಯಂತ್ರಣ ಹೊಂದಿರುವ ಕಡೆಗಳಲ್ಲಿ ಅವರನ್ನು ಬಹಿರಂಗವಾಗಿ ಬಂದೀಖಾನೆಯಲ್ಲಿರುವಂತೆ ನಿರ್ಬಂಧಿಸುತ್ತಿದೆ. ಎಲ್ಲಾ ಕಡೆಗಳಿಂದಲೂ ಫೆಲೆಸ್ತೀನಿಯರನ್ನು ಮುತ್ತಿಗೆ ಹಾಕುತ್ತಾ ಅವರನ್ನು ಸಂಕಷ್ಟಕ್ಕೊಳಪಡಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.

ತನ್ನ ದೂತವಾಸವನ್ನು ಟೆಲ್‌ಈವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಅಮೆರಿಕಾದ ನಿರ್ಧಾರ ಕೂಡಾ ಸರಿಯಲ್ಲ. ವಿಶೇಷವಾಗಿ ಇದು ಇಸ್ರೇಲ್ ಮತ್ತು ಫೆಲೆಸ್ತೀನ್ ನಡುನ ಶಾಂತಿ ಮಾತುಕತೆ ನಡೆಸುವ ಮಧ್ಯವರ್ತಿ ದೇಶ ಎಂದು ಸ್ವತಃ ಪ್ರಸ್ತುತಪಡಿಸುತ್ತಿರುವಾಗ, ಇದು ಫೆಲೆಸ್ತೀನಿಯರಿಗೆ ಮತ್ತೊಂದು ಅವಮಾನಕಾರಿ ದ್ರೋಹವಾಗಿದೆ. ಅಲ್ಲದೆ ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳನ್ನು ಕಡೆಗಣಿಸುವ ಮುಕ್ತ ಪ್ರದರ್ಶನವಾಗಿ ಗೋಚರಿಸುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ ಇರುವ ಅಸ್ಥಿರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ಇ.ಅಬೂಬಕರ್ ಹೇಳಿದ್ದಾರೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ನಡೆಸುತ್ತಿರುವ ಅನ್ಯಾಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಧ್ವನಿಗೂಡಿಸಬೇಕು ಮತ್ತು ಫೆಲೆಸ್ತೀನಿಯರ ಹಕ್ಕು ಮತ್ತು ಘನತೆಯನ್ನು ಪುನಃಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ವಿಶ್ವದ ದೇಶಗಳು ಮುಂದಾಗಬೇಕು ಎಂದು ಪಿಎಫ್‌ಐ ಆಗ್ರಹಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News