ನಿರೀಕ್ಷಿತ ಮತದಾನವಾಗುತ್ತಿದ್ದರೆ ಗೆಲುವು ನನ್ನದಾಗುತ್ತಿತ್ತು: ಶ್ರೀಕರ ಪ್ರಭು

Update: 2018-05-16 12:47 GMT

ಮಂಗಳೂರು, ಮೇ 16: ಯಾರನ್ನೂ ಸೋಲಿಸುವುದಕ್ಕಾಗಿ ಅಥವಾ ಗೆಲ್ಲಿಸುವುದಕ್ಕಾಗಿ ನಾನು ಸ್ಪರ್ಧೆ ಮಾಡಿಲ್ಲ. ಸಮಾಜ ಸೇವೆಯನ್ನು ಮುಂದುವರಿಸುವುದಕ್ಕಾಗಿ ಮಾತ್ರ ಸ್ಪರ್ಧೆ ಮಾಡಿದ್ದೆ. ಸುಮ್ಮನೆ ಕೂತರೆ ಶ್ರೀಕರ ಪ್ರಭು ಯಾರೆಂಬುದೇ ಮರೆತುಹೋಗಬಹುದು. ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವ ಮೂಲಕ ನನ್ನ ಗುರಿ ಈಡೇರಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 64.5 ಶೇಕಡದಷ್ಟು ಮಾತ್ರ ಮತದಾನವಾಗಿದೆ. ನಿರೀಕ್ಷೆಯಷ್ಟು ಮತದಾನವಾಗುತ್ತಿದ್ದರೆ ಗೆಲುವು ನನ್ನ ಪಾಲಾಗುತ್ತಿತ್ತು ಎಂದು ಬುಧವಾರ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೈಟ್‌ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿ ನಾಮಕರಣ ವಿವಾದವೇ ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತವಾಗಿ ಪರಿವರ್ತನೆಗೊಂಡಿದೆ. ನಾನು ಗೆದ್ದರೆ ಲೈಟ್‌ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರನ್ನು ಇಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದೆ. ಜೆ.ಆರ್.ಲೋಬೋ ಅವರು ಜಾತಿವಾದ ಮಾಡುತ್ತಿದ್ದಾರೆ ಎನ್ನುವ ಉಲ್ಲೇಖ ಗೆಲ್ಲುವ ವ್ಯಕ್ತಿಗೆ ಲಾಭ ಆಗಿದೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಹೇಳಿದರು.

ಮುಂದೆಯೂ ಸ್ಪರ್ಧೆ: ಮುಂದಿನ ಲೋಕಸಭೆ ಮತ್ತು ಮನಪಾ ಚುನಾವಣೆಯಲ್ಲಿ ನಾನು ಮತ್ತು ನನ್ನ ಬೆಂಬಲಿಗರು ಸ್ಪರ್ಧೆ ಮಾಡಲಿದ್ದೇವೆ. ಈ ಬಾರಿಯ ಚುನಾವಣೆ ಮುಂದಿನ ಚುನಾವಣೆಗೆ ವೇದಿಕೆ ನಿರ್ಮಿಸಿಕೊಟ್ಟಿದೆ ಎಂದ ಶ್ರೀಕರ ಪ್ರಭು, ಇವಿಎಂ ಯಂತ್ರದ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಇವಿಎಂನಿಂದ ಮತಗಳು ಕಮ್ಮಿ ಬಂದಿದೆ, ಸೋಲಾಗಿದೆ ಎಂಬ ಆರೋಪಗಳು ಸುಳ್ಳು ಎಂದರು.

ಶ್ರೀಕರ ಪ್ರಭು ಅಭಿಮಾನಿ ಸಂಘದ ಅಧ್ಯಕ್ಷ ಕೆ.ಪಿ.ಶೆಟ್ಟಿ ಬೇಡೆ ಮಾರು, ಪ್ರಮುಖರಾದ ಸುರೇಶ್ ಶೆಟ್ಟಿ, ಅಶ್ವಿತ್, ಜಯರಾಮ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News