ದಿಲ್ಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಪೊಲೀಸರಿಂದ ಕೇಜ್ರಿವಾಲ್ ವಿಚಾರಣೆ

Update: 2018-05-16 14:47 GMT

ಹೊಸದಿಲ್ಲಿ, ಮೇ 16: ನಾಲ್ಕು ತಿಂಗಳ ಹಿಂದೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ದಿಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಜ್ರಿವಾಲ್‌ರನ್ನು ಮೇ 18ರಂದು ವಿಚಾರಣೆ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿಯಲ್ಲಿ ನಡೆದ ಈ ಘಟನೆಯಿಂದ ದಿಲ್ಲಿ ಸರಕಾರ ಮತ್ತು ಅಧಿಕಾರಿಗಳ ಮಧ್ಯೆ ತೆರೆಮರೆಯಲ್ಲಿ ಸಮರ ಏರ್ಪಟ್ಟಿತ್ತು. ಸದ್ಯ ನಡೆಯುತ್ತಿರುವ ತನಿಖೆಯಲ್ಲಿ ಸಹಕರಿಸುವಂತೆ ಸೂಚಿಸಿ ಕೇಜ್ರಿವಾಲ್‌ಗೆ ಭಾರತೀಯ ದಂಡಸಂಹಿತೆ ಸೆಕ್ಷನ್ 160ರ ಅಡಿಯಲ್ಲಿ ನೊಟೀಸ್ ಜಾರಿ ಮಾಡಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಉತ್ತರ) ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ಫೆಬ್ರವರಿ 19ರಂದು ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದಿದೆ ಎನ್ನಲಾಗಿರುವ ಈ ಪ್ರಕರಣದ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದ ಹನ್ನೊಂದು ಶಾಸಕರನ್ನು ಈಗಾಗಲೇ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ನನ್ನೂ ಪೊಲೀಸರು ಪ್ರಶ್ನಿಸಿದ್ದು, ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಫೆಬ್ರವರಿ 23ರಂದು ಮುಖ್ಯಮಂತ್ರಿ ನಿವಾಸದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆಗೆ ತೆಗೆದುಕೊಂಡು ಹೋಗಲಾಗಿದ್ದು ಇದರ ವರದಿಯು ಇನ್ನಷ್ಟೇ ಬರಬೇಕಿದೆ. ಪೊಲೀಸರ ಆರೋಪಗಳನ್ನು ತಳ್ಳಿಹಾಕಿರುವ ಆಪ್ ಇದು ಮುಖ್ಯಮಂತ್ರಿಯನ್ನು ಸಿಲುಕಿಸಲು ನಡೆಸುತ್ತಿರುವ ಹುನ್ನಾರ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News