ರಮಝಾನ್ ಕದನವಿರಾಮ: ಮೆಹಬೂಬ ಮುಫ್ತಿ ಮನವಿಗೆ ಕೇಂದ್ರ ಒಪ್ಪಿಗೆ

Update: 2018-05-16 15:03 GMT

ಶ್ರೀನಗರ, ಮೇ 16: ಪವಿತ್ರ ರಮಝಾನ್ ತಿಂಗಳಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆಗಳನ್ನು ನಡೆಸದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮಾಡಿರುವ ಮನವಿಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ತಿಳಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆ ಜೊತೆ ಮಾತನಾಡಿದ ಮೆಹಬೂಬ ಮುಫ್ತಿ, ಗೃಹ ಸಚಿವ ರಾಜನಾಥ್ ಸಿಂಗ್ ನನಗೆ ಕರೆ ಮಾಡಿ ರಮಝಾನ್ ಸಮಯದಲ್ಲಿ ಕದನವಿರಾಮ ಘೊಷಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. 

ಇದೊಂದು ಉತ್ತಮ ಸುದ್ದಿ. ಎಲ್ಲರೂ ಈ ನಡೆಯನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಪವಿತ್ರ ರಮಝಾನ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಕಾರ್ಯಾಚರಣೆ ನಡೆಸದಂತೆ ಕೇಂದ್ರವು ಭದ್ರತಾ ಪಡೆಗಳಿಗೆ ಸೂಚಿಸುತ್ತದೆ. ಈ ನಿರ್ಧಾರವನ್ನು ಶಾಂತಿಪ್ರಿಯ ಮುಸ್ಲಿಮರು ಶಾಂತಿಯುತ ವಾತಾವರಣದಲ್ಲಿ ರಮಝಾನ್ ಆಚರಿಸಲಿ ಎಂಬ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ. ಆದರೆ ದಾಳಿ ನಡೆದ ಸಂದರ್ಭದಲ್ಲಿ ಪ್ರತಿದಾಳಿ ಮಾಡಲು ಮತ್ತು ಮುಗ್ಧ ಜನರ ಪ್ರಾಣವನ್ನು ಕಾಪಾಡಲು ಅಗತ್ಯಬಿದ್ದಲ್ಲಿ ದಾಳಿಯನ್ನು ನಡೆಸುವ ನಿರ್ಧಾರ ಭದ್ರತಾ ಪಡೆಗಳಿಗೆ ಬಿಟ್ಟದ್ದು. ಎಲ್ಲರೂ ನಮ್ಮ ಈ ನಿರ್ಧಾರವನ್ನು ಬೆಂಬಲಿಸಿ ಮುಸ್ಲಿಂ ಸಹೋದರ ಮತ್ತು ಸಹೋದರಿಯರು ಶಾಂತಿಯಿಂದ ಯಾವುದೇ ಸಮಸ್ಯೆಯಿಲ್ಲದೆ ರಮಝಾನ್ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರ ಮನವಿ ಮಾಡುತ್ತದೆ ಎಂದು ಸರಕಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೊನೆಯ ಬಾರಿ ಭಾರತ ಸರಕಾರವು 2000 ಇಸವಿಯಲ್ಲಿ ವಾಜಪೇಯಿ ಸರಕಾರ ಇರುವಾಗ ರಮಝಾನ್ ಸಮಯದಲ್ಲಿ ಏಕಪಕ್ಷೀಯ ಕದನವಿರಾಮ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News