ಜೂ.15ರೊಳಗೆ 1,000 ಕೋ.ರೂ.ಠೇವಣಿ ಇಡಲು ಜೆಎಎಲ್‌ಗೆ ಸುಪ್ರೀಂ ನಿರ್ದೇಶ

Update: 2018-05-16 16:05 GMT

ಹೊಸದಿಲ್ಲಿ,ಮೇ 16: ಸಾಲದ ಸುಳಿಯಲ್ಲಿ ಸಿಲುಕಿರುವ ತನ್ನ ಅಂಗಸಂಸ್ಥೆ ಜೇಪಿ ಇನ್‌ಫ್ರಾಟೆಕ್ ಲಿ.ನಿಂದ ಮನೆಗಳನ್ನು ಖರೀದಿಸಿದವರಿಗೆ ಹಣವನ್ನು ವಾಪಸ್ ಮಾಡಲು ಜೂನ್ 15ರೊಳಗೆ 1,000 ಕೋ.ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿಯಿರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಜೈಪ್ರಕಾಶ ಅಸೋಸಿಯೇಟ್ಸ್ ಲಿ.(ಜೆಎಎಲ್)ಗೆ ಆದೇಶಿಸಿದೆ.

ಹಣವನ್ನು ಠೇವಣಿಯಿರಿಸಿದರೆ ಜೇಪಿ ಇನ್‌ಫ್ರಾಟೆಕ್ ವಿರುದ್ಧ ಸಮಾಪನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ನೇತೃತ್ವದ ಪೀಠವು,ನ್ಯಾಯಾಲಯದ ನಿರ್ದೇಶದಂತೆ ಹಣವನ್ನು ಠೇವಣಿ ಇಡಲು ವಿಫಲಗೊಂಡರೆ ಕಂಪನಿಯ ವಿರುದ್ಧ ಕಾನೂನು ಕ್ರಮವು ಆರಂಭಗೊಳ್ಳಲಿದೆ ಎಂದು ತಿಳಿಸಿತು.

ತಾವು ತಮ್ಮ ಅಪಾರ್ಟ್‌ಮೆಂಟ್‌ಗಳನ್ನು ಕಳೆದುಕೊಳ್ಳಬಹುದು ಮತ್ತು ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ಆತಂಕಗೊಂಡಿರುವ ಸುಮಾರು 32,000 ಅತಂತ್ರ ಮನೆ ಖರೀದಿದಾರರು ಜೇಪಿ ಇನ್‌ಫ್ರಾಟೆಕ್ ವಿರುದ್ಧದ ದಿವಾಳಿ ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಇನ್‌ಸಾಲ್ವೆನ್ಸಿ ಆ್ಯಂಡ್ ಬ್ಯಾಂಕರಪ್ಟ್ಸಿ ಕೋಡ್‌ನಡಿ ಯಾವುದೇ ನಿರ್ಣಯವು ಸಾಲ ನೀಡಿದವರಿಗೆ ಮರುಪಾವತಿಗೆ ಆದ್ಯತೆ ನೀಡುತ್ತದೆ ಎನ್ನುವುದು ಅವರ ಚಿಂತೆಗೆ ಕಾರಣವಾಗಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದಲ್ಲಿ ಕಂಪನಿಯ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯವು ಸೆ.4ರಂದು ತಡೆಯಾಜ್ಞೆ ನೀಡಿತ್ತಾದರೂ ಬಳಿಕ ಅದನ್ನ ಹಿಂದೆಗೆದುಕೊಂಡಿತ್ತು.

ಮನೆ ಖರೀದಿದಾರರ ಹಿತಾಸಕ್ತಿಗಳ ರಕ್ಷಣೆಗಾಗಿ 2,000 ಕೋ.ರೂ.ಗಳನ್ನು ಠೇವಣಿಯಿರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಜೆಎಎಲ್‌ಗೆ ಆದೇಶಿಸಿದ್ದು,ಕಂತುಗಳ ಅವಕಾಶವನ್ನು ನೀಡಿತ್ತು. ಕಂಪನಿಯು ಈವರೆಗೆ 750 ಕೋ.ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿಯಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News