ವಿಜಯೋತ್ಸವ ಸಂಭ್ರಮ: ಅಲ್ಲಲ್ಲಿ ದಾಂಧಲೆ ದೂರು

Update: 2018-05-16 17:14 GMT

ಉಡುಪಿ, ಮೇ 16: ಮಂಗಳವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಬಳಿಕ ವಿಜಯೋತ್ಸವ ಆಚರಿಸುತಿದ್ದ ಗುಂಪು ಗಳು ಜಿಲ್ಲೆಯ ಅನೇಕ ಕಡೆಗಳಲ್ಲಿ ದಾಂಧಲೆ ನಡೆಸಿರುವ ಬಗ್ಗೆ ವರದಿಗಳು ಬಂದಿವೆ.

ಹಿರಿಯಡ್ಕ: ಪೆರ್ಡೂರು ಗ್ರಾಮದ ಅಡಪಾಡಿಯ ಜಯಾನಂದ ಪೂಜಾರಿ ಎಂಬವರು ಟೆಂಪೋ ಗಾಡಿಯನ್ನು ತಮ್ಮ ಜಾಗದಲ್ಲಿ ನಿಲ್ಲಿಸಿದ್ದು, ವಿಜಯೋತ್ಸವ ಆಚರಿಸುತ್ತಾ, ಪಟಾಕಿ ಸಿಡಿಸಿಕೊಂಡು ಬಂದ ಬಿಜೆಪಿ ಮತ್ತು ಬಜರಂಗ ದಳದ ಸಜಿತ್, ಅಜಿತ್, ಸತೀಶ್ ಪ್ರಭು, ಕೃಷ್ಣ ಪೂಜಾರಿ, ಸಂದೇಶ ಶೆಟ್ಟಿ ಮುಂತಾದವರ ಗುಂಪು ಟೆಂಪೋ ಗಾಡಿಗೆ ಬೆಂಕಿ ಹಾಕಿ ಗಾಜನ್ನು ಒಡೆದು ಜಖಂಗೊಳಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ಜಯಾನಂದ ಪೂಜಾರಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಬೈಕಾಡಿ ಗ್ರಾಮದ ಗಾಂಧಿನಗರದ ತಮ್ಮ ಮನೆಯಲ್ಲಿ ಮಂಗಳವಾರ ಅಪರಾಹ್ನ 2:30ರ ಸುಮಾರಿಗೆ ಟಿವಿ ನೋಡುತ್ತಿರುವಾಗ ಆರೋಪಿಗಳಾದ ಅಭಿಷೇಕ, ಮಹೇಶ, ಪ್ರದೀಪ್, ದಿನಕರ, ರಿತೇಶ್, ವಸಂತಿ, ಮುನ್ನಾ ಮುಂತಾದ 50-60ಮಂದಿಯ ಗುಂಪು ಮನೆಯ ಬಳಿ ಬಂದು ಪಟಾಕಿ ಸಿಡಿಸಿ ಬೊಬ್ಬೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಯ ಕಾಂಪೌಂಡ್‌ಗೆ ನುಗ್ಗಿ ಕುಮಾರ್ ಸುವರ್ಣ, ಅವರ ಮಗ, ತಡೆಯಲು ಪತ್ನಿ ಸುಜಾತ ಹಾಗೂ ಪಕ್ಕದ ಮನೆಯ ಸವಿತಾರಿಗೆ ಹಲ್ಲೆ ನಡೆಸಲಾಗಿದೆ. ಅಲ್ಲದೇ ಮನೆಯ ಕಾಂಪೌಂಡ್‌ನಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಲಾಗಿದೆ ಎಂದು ಕುಮಾರ್ ಸುವರ್ಣ ನೀಡಿದ ದೂರಿನಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಹಳ್ಳಿಹೊಳೆಗೆ ಗ್ರಾಮದ ಅರಮನೆಕೊಡ್ಲು ಎಂಬಲ್ಲಿ ಮಂಗಳವಾರ ಅಪರಾಹ್ನ 1:30ರ ಸುಮಾರಿಗೆ ಆರೋಪಿಗಳಾದ ಮಂಜುನಾಥ ಶೆಟ್ಟಿ, ರಾಮ ನಾಯ್ಕ, ಪ್ರದೀಪ ಕೊಠಾರಿ ಸೇರಿದಂತೆ ಸುಮಾರು 30-40 ಮಂದಿಯ ಗುಂಪು ತಮ್ಮ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಪಟಾಕಿ ಹೊಡೆಯಲು ಆರಂಭಿಸಿದ್ದು, ಇದನ್ನು ಪ್ರಶ್ನಿಸಿದ ತನಗೆ, ಪತ್ನಿ ಹಾಗೂ ಅತ್ತಿಗೆ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಲಾಗಿದೆ ಎಂದು ರಾಮಕೃಷ್ಣ ನಾಯ್ಕಿ ಎಂಬವರು ಶಂಕರನಾರಾಯಣ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News