ಮೇ 21ರಿಂದ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ

Update: 2018-05-16 17:17 GMT

ಉಡುಪಿ, ಮೇ 16: ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ತಾಳಮದ್ದಲೆ ಸಪ್ತಾಹ’ ಈ ಬಾರಿ ಮೇ 21ರಿಂದ 27ರವರೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.

ಮೇ 21ರ ಸೋಮವಾರ ಸಂಜೆ 6:00ಕ್ಕೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ಜನರಲ್ ಮೆನೇಜರ್ ಭಾಸ್ಕರ ಹಂದೆ, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬಳೆ, ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಹಾಗೂ ಯು.ಎಸ್.ಎ ಯಕ್ಷಗಾನ ಕಲಾವೃಂದದ ಪಿ.ವಾಸುದೇವ ಐತಾಳ್ ಭಾಗವಹಿಸಲಿದ್ದಾರೆ.

‘ಆಚಾರ್ಯ ಶುಕ್ರ’ ಶೀರ್ಷಿಕೆಯಲ್ಲಿ ಒಂದು ವಾರ ಕಾಲ ಪ್ರತಿದಿನ ಸಂಜೆ 6:00ರಿಂದ 9:00 ರವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅನುಕ್ರಮವಾಗಿ ಶುಕ್ರೋದ್ಭವ, ಸಂಜೀವಿನಿ ಸಂಕಲ್ಪ, ಸಂಜೀವಿನಿ ಸಿದ್ಧಿ, ಹರಿಚಾರ್ವಾಕ, ಮೃತಸಂಜೀವಿನಿ, ವಿಶ್ವಜಿತ್‌ಯಾಗ, ಬಲಿದಾನ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ. ಹಿರಿಯ ಅರ್ಥಧಾರಿ ಕೆ.ಶ್ರೀಕರ ಭಟ್ ಪ್ರಧಾನ ಅವಲೋಕನಕಾರರಾಗಿ ಭಾಗವಹಿಸಲಿದ್ದಾರೆ.

ಸಪ್ತಾಹದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮೇ 27ರ ರವಿವಾರ ಸಂಜೆ 5:00ಕ್ಕೆ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.

ಈ ಬಾರಿಯ ಮಟ್ಟಿ ಮುರಲೀಧರ ರಾವ್ ಹಾಗೂ ಪೆರ್ಲ ಕೃಷ್ಣ ಭಟ್ ಹೆಸರಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಅನುಕ್ರಮವಾಗಿ ಹಿರಿಯ ತಾಳಮದ್ದಲೆ ಅರ್ಥಧಾರಿಗಳಾದ ಚಂದ್ರಶೇಖರ ರಾವ್ ಬಿ. ಹಾಗೂ ಪ್ರೊ. ಎಂ.ಎ.ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು. ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಬಿ.ನಾಗರಾಜ್ ರಾವ್, ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಹಾಗೂ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News