×
Ad

ಯಡಿಯೂರಪ್ಪ ಪ್ರಮಾಣ ವಚನ ತಡೆಗೆ ಸುಪ್ರೀಂ ನಕಾರ

Update: 2018-05-17 08:46 IST

ಹೊಸದಿಲ್ಲಿ, ಮೇ 17: ಸುಪ್ರೀಂಕೋರ್ಟ್‌ನ ಹೊರಗೆ ಮತ್ತು ಒಳಗೆ ಗುರುವಾರ ಮುಂಜಾನೆವರೆಗೂ ಬಿರುಸಿನ ಚಟುವಟಿಕೆಗಳು ನಡೆದು, ಕೊನೆಗೂ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದ್ದ ತಡೆ ನಿವಾರಣೆಯಾಗಿದೆ.

ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಅಪರೂಪ ಎಂಬಂತೆ ಮಧ್ಯರಾತ್ರಿ ಬಳಿಕ 2.11ಕ್ಕೆ ಆರಂಭಿಸಿದ ತ್ರಿಸದಸ್ಯ ನ್ಯಾಯಪೀಠ, ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಲು ನಿರಾಕರಿಸಿತು. ಸುಮಾರು ಮೂರು ಗಂಟೆಗಳ ಸುಧೀರ್ಘ ಕಾಲ ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಮತ್ತು ಸರ್ಕಾರ ರಚನೆ, ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿಗೆ ಬಾಧ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿತು.

ಅಂತೆಯೇ ಸರ್ಕಾರ ರಚನೆ ಸಂಬಂಧ ಬಿಜೆಪಿ, ರಾಜ್ಯಪಾಲರಿಗೆ ಕಳುಹಿಸಿದ ಪತ್ರದ ಪ್ರತಿಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದು, ಪ್ರಕರಣದ ಬಗ್ಗೆ ಅಗತ್ಯ ನಿರ್ಧಾರ ಕೈಗೊಳ್ಳುವ ಮುನ್ನ ಪತ್ರವನ್ನು ಪರಿಶೀಲಿಸುವುದಾಗಿ ಹೇಳಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕರ್ನಾಟಕ ಸರ್ಕಾರಕ್ಕೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿದೆ.

ಬುಧವಾರ ರಾತ್ರಿ ಕರ್ನಾಟಕದ ರಾಜ್ಯಪಾಲ ವಾಜುಭಾಯ್ ವಾಲಾ, ಸರ್ಕಾರ ರಚನೆಗೆ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಿದ ಕ್ರಮಬದ್ಧತೆಯನ್ನು ಪ್ರಶ್ನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದವು.

224 ಸದಸ್ಯ ಬಲದ ವಿಧಾನಸಭೆಯಲ್ಲಿ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದ ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಜೆಡಿಎಸ್ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಪತ್ರ ನೀಡಿದ್ದರಿಂದ ಈ ಮೈತ್ರಿಕೂಟದ ಬಲ 116ಕ್ಕೆ ಏರಿದೆ. ಕಾಂಗ್ರೆಸ್ 78 ಹಾಗೂ ಜೆಡಿಎಸ್ 38 ಸ್ಥಾನಗಳನ್ನು ಗೆದ್ದಿದ್ದವು. ಬಹುಮತಕ್ಕೆ ಎಂಟು ಶಾಸಕರ ಕೊರತೆ ಇದ್ದರೂ, ಗುರುವಾರ ಪ್ರಮಾಣ ವಚನ ಸ್ವೀಕರಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಯಾವ ಕೇಂದ್ರ ನಾಯಕರೂ ಪ್ರಮಾಣ ವಚನ ಸ್ವೀಕಾರಕ್ಕೆ ಹಾಜರಾಗುತ್ತಿಲ್ಲ. ಬಹುಮತ ಸಾಬೀತಿಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News