×
Ad

ವಜುಭಾಯ್ ವಾಲಾ- ದೇವೇಗೌಡ ಜಂಗಿ ಕುಸ್ತಿಯ ಇತಿಹಾಸ ಗೊತ್ತೇ ?

Update: 2018-05-17 09:41 IST

ಹೊಸದಿಲ್ಲಿ, ಮೇ 17: ಗುಜರಾತ್‌ನಲ್ಲಿ 1996ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸೆಪ್ಟೆಂಬರ್ 18ರಂದು ಸದನದ ವಿಶ್ವಾಸಮತ ಗೆದ್ದಿತ್ತು. ಆದರೆ ಇದಾದ 24 ಗಂಟೆಗಳ ಒಳಗಾಗಿ ಯುನೈಟೆಡ್ ಫ್ರಂಟ್ ಪ್ರಧಾನಿ, ಗುಜರಾತ್ ಸರ್ಕಾರವನ್ನು ರಾಜ್ಯಪಾಲರ ವರದಿ ಆಧಾರದಲ್ಲಿ ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದರು. ಗುಜರಾತ್ ಬಿಜೆಪಿ ಅಧ್ಯಕ್ಷರು, ಇದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿದ್ದರು.

ಆ ಶಿಫಾರಸ್ಸು ಮಾಡಿದ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರದ ನಿರ್ಧಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ಅಧ್ಯಕ್ಷ ವಜುಭಾಯ್ ವಾಲಾ. ಆದರೆ ಇದೀಗ ಕಾಲಚಕ್ರ ಬದಲಿದೆ. ಇಂದು ವಜುಭಾಯ್ ವಾಲಾ ಕರ್ನಾಟಕದ ರಾಜ್ಯಪಾಲ ಹಾಗೂ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ವಾಲಾ ಅವರಲ್ಲಿ ಹಕ್ಕು ಮಂಡಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆಗೆ ವಾಲಾ ಅವಕಾಶ ನೀಡಿದ್ದಾರೆ. 224 ಸದಸ್ಯರ ವಿಧಾನಸಭೆಯಲ್ಲಿ 104 ಸ್ಥಾನಗಳನ್ನು ಗೆದ್ದ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿದ್ದು, ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಬಿಜೆಪಿ ಸೇರುವ ಮುನ್ನ ಆರೆಸ್ಸೆಸ್ ಪ್ರಚಾರಕರಾಗಿದ್ದ ವಜುಭಾಯ್ ವಾಲಾ, ರಾಜ್‌ಕೋಟ್ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಹಣಕಾಸು, ಕಂದಾಯದಂಥ ಖಾತೆಗಳನ್ನು ನಿರ್ವಹಿಸಿದ್ದ ವಾಲಾ, ಬಳಿಕ ಗುಜರಾತ್ ಸ್ಪೀಕರ್ ಆಗಿದ್ದರು. ಮೋದಿ ಮೊದಲ ಬಾರಿಗೆ ಗುಜರಾತ್ ವಿಧಾನಸಭೆಗೆ ಸ್ಪರ್ಧಿಸಿದಾಗ, ವಾಲಾ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಮೋದಿ ಮಣಿನಗರ್ ಕ್ಷೇತ್ರವನ್ನು ಆಯ್ದುಕೊಂಡ ಬಳಿಕ ಮತ್ತೆ ವಾಲಾ ಹಳೆಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಗುಜರಾತ್‌ನಲ್ಲಿ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಿದ್ದ ಕಾರಣಕ್ಕಾಗಿ ಪಾನಿ ವಾಲಾ ಎಂದೇ ಖ್ಯಾತರಾಗಿದ್ದರು. 80 ವರ್ಷದ ವಾಲಾ ಗುಜರಾತ್‌ನಲ್ಲಿ 18 ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ.

ಮೋದಿ ಬಳಿಕ ಸಿಎಂ ಗಾದಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ವಾಲಾ ಬದಲಾಗಿ ಆನಂದಿಬೆನ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಮೋದಿ ಪ್ರಧಾನಿಯಾದ ಕೆಲವೇ ತಿಂಗಳಲ್ಲಿ ಅಂದರೆ 2014ರ ಸೆಪ್ಟೆಂಬರ್‌ನಲ್ಲಿ ವಾಲಾ ಅವರನ್ನು ಕರ್ನಾಟಕ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News