ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ ಯಡಿಯೂರಪ್ಪ ಸರಕಾರದ ಭವಿಷ್ಯ !

Update: 2018-05-17 06:32 GMT

ಹೊಸದಿಲ್ಲಿ,ಮೇ.17 : ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್ ಮಧ್ಯ ರಾತ್ರಿ ನಂತರ ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನಕ್ಕೆ ತಡೆ ಹೇರಲು ನಿರಾಕರಿಸಿದೆ.

ಕಾಂಗ್ರೆಸ್-ಜೆಡಿಎಸ್ ತನ್ನ ಮುಂದೆ ಸಲ್ಲಿಸಿರುವ ಅರ್ಜಿ ಮೇಲಿನ ಅಂತಿಮ ಆದೇಶವು ಪ್ರಮಾಣವಚನ ಸ್ವೀಕಾರ ಹಾಗೂ ಸರಕಾರ ರಚನೆಗೆ ಅನ್ವಯವಾಗುತ್ತದೆ ಎಂದು ಪ್ರಮಾಣವಚನ ನಡೆಯುವ ಕೆಲವೇ ಗಂಟೆಗಳ ಮುನ್ನ ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ.

ಭಾರತೀಯ ಜನತಾ ಪಕ್ಷವು ತನಗೆ ಸರಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ನೀಡಿದ್ದ ಪತ್ರವನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತುತ ಪಡಿಸುವಂತೆ  ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎಸ್ ಎ ಬೊಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡು ತ್ರಿಸದಸ್ಯ ಪೀಠ  ಆದೇಶಿಸಿದೆ. ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಪತ್ರವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಮುಂದಿನ ವಿಚಾರಣೆ ಶುಕ್ರವಾರ 10.30ಕ್ಕೆ ನಡೆಯಲಿದೆ.  

ಯಡಿಯೂರಪ್ಪ ಅವರು ಸರಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಎರಡು ಪತ್ರ ಬರೆದಿದ್ದಾರೆ. ಆದರೆ ಈ ಎರಡೂ ಪತ್ರಗಳಲ್ಲಿ ಅವರು ತಮ್ಮ ಪಕ್ಷದಲ್ಲಿ ಬಹುಮತಕ್ಕೆ ಬೇಕಾದ 112 ಶಾಸಕರು ಇದ್ದಾರೆ ಎಂದು ಹೇಳಿಲ್ಲ. ಬಿಜೆಪಿ ಗೆದ್ದಿರುವುದು 104 ಸ್ಥಾನಗಳನ್ನು. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ 118 ಮಂದಿ ಶಾಸಕರ ಸಹಿ ಹಾಕಿಸಿವೆ. ಇದು ಬಹುಮತಕ್ಕಿಂತ (112) ಹೆಚ್ಚು ಸ್ಥಾನಗಳು. ಆದರೆ ರಾಜ್ಯಪಾಲರಿಗೆ ಬರೆದ ಪತ್ರಗಳ ಬುಧವಾರ ತಡರಾತ್ರಿ ವಿಚಾರಣೆ ನಡೆಯುವಾಗ ಸುಪ್ರೀಂ ಕೋರ್ಟ್ ಮುಂದಿರಲಿಲ್ಲ.  ಇಷ್ಟು ಸರಳ ಲೆಕ್ಕಾಚಾರ ಎದುರಲ್ಲಿ ಇರುವಾಗ ರಾಜ್ಯಪಾಲರು ಹೇಗೆ ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಅಹ್ವಾನ ನೀಡಿದರು ಎಂಬುದು ಸುಪ್ರೀಂ ಕೋರ್ಟ್ ಪ್ರಶ್ನೆ. ಅದಕ್ಕಾಗಿ ಶುಕ್ರವಾರ ಬೆಳಗ್ಗೆ 10. 30 ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ಆಗ ರಾಜ್ಯಪಾಲರಿಗೆ ಬರೆದ ಪತ್ರಗಳನ್ನು ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಗೆ ಹೇಳಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಪ್ರಮಾಣ ವಚನವನ್ನು ತಡೆದಿಲ್ಲ. ಶುಕ್ರವಾರ ವಿಚಾರಣೆ ನಡೆಸಿ ಪತ್ರಗಳ ಪರಿಶೀಲನೆ ಆದ ಬಳಿಕ ಸುಪ್ರೀಂ ಕೋರ್ಟ್ ಯಡಿಯೂರಪ್ಪ ಸರಕಾರದ ಭವಿಷ್ಯವನ್ನು ನಿರ್ಧರಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News