ಮಂಗಳೂರು: ಚಲಿಸುತ್ತಿದ್ದ ಕಾರಿಗೆ ಬೆಂಕಿ; ಭಾಗಶಃ ಹಾನಿ
Update: 2018-05-17 16:23 IST
ಮಂಗಳೂರು, ಮೇ 17: ನಗರದ ಜ್ಯೋತಿಯ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಅನಾಹುತ ಆದ ಘಟನೆ ಗುರುವಾರ ನಡೆದಿದೆ.
ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಚಲಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಆವರಿಸಿದ್ದು, ಅಪಾಯದ ಮುನ್ಸೂಚನೆ ಅರಿತ ಚಾಲಕ ಮತ್ತಿತರರು ತಕ್ಷಣ ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.
ಜನನಿಬಿಡ ರಸ್ತೆಯಲ್ಲೇ ಈ ದುರ್ಘಟನೆ ನಡೆದ ಕಾರಣ ಜನರು ಕ್ಷಣಕಾಲ ಅವಕ್ಕಾದರು. ಧಗಧಗನೆ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ನಂದಿಸಿದ್ದಾರೆ. ಆದರೆ ಕಾರು ಬಹುತೇಕ ಸುಟ್ಟು ಕರಕಲಾಗಿದೆ.