×
Ad

ಮಂಗಳೂರು ವಿವಿ ಪದವಿ, ಸ್ನಾತಕೋತ್ತರ ವಿಭಾಗ ತುಳು ಪಠ್ಯ ರಚನಾ ಸಮಿತಿ ಸಭೆ

Update: 2018-05-17 17:37 IST

ಮಂಗಳೂರು, ಮೇ 17: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ತುಳು ಭಾಷೆಯನ್ನು ಒಂದು ವಿಷಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪಠ್ಯ ವಸ್ತುಗಳ ರಚನೆ ಬಗ್ಗೆ ವಿಶ್ವ ವಿದ್ಯಾಲಯದ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ ರವರ ಅಧ್ಯಕ್ಷತೆಯಲ್ಲಿ ಇಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಚಾವಡಿಯಲ್ಲಿ ಸಭೆ ಜರಗಿತು.

ಸ್ನಾತಕೋತ್ತರ ವಿಭಾಗದ ಪಠ್ಯ ರಚನಾ ಸಮಿತಿಯ ಅಧ್ಯಕ್ಷರಾದ ಪ್ರೊ. ಶಿವರಾಮ ಶೆಟ್ಟಿ ಹಾಗೂ ಪದವಿ ತರಗತಿಗಳ ಪಠ್ಯ ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಪೂವಪ್ಪ ಕಣಿಯೂರು ರವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಅಧ್ಯಯನ ಮಂಡಳಿ ಸಮಿತಿ ಸದಸ್ಯರಾದ ಎ.ಸಿ ಭಂಡಾರಿ, ಚಂದ್ರಕಲಾ ನಂದಾವರ, ಡಾ. ರಾಜಶ್ರೀ, ಡಾ. ಸಾಯಿಗೀತಾ ಹೆಗ್ಡೆ ಮತ್ತು ಪಠ್ಯ ರಚನಾ ಸಮಿತಿಯ ಸದಸ್ಯರಾದ ಡಾ. ವಿಶ್ವನಾಥ ಬದಿಕಾನ, ಡಾ. ನಿಕೇತನ್, ಡಾ. ನರೇಂದ್ರ ರೈ ದೇರ್ಲ, ಹಾಗೂ ಡಾ. ಕಿಶೋರ್ ಕುಮಾರ್ ರೈ ಭಾಗವಹಿಸಿದ್ದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ತುಳು ಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಅವಕಾಶ ಕಲ್ಪಿಸುವುದಕ್ಕಾಗಿ ಶೀಘ್ರ ಪಠ್ಯ ರಚನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಈಗಾಗಲೇ 3 ಸಭೆಗಳನ್ನು ನಡೆಸಲಾಗಿದ್ದು ಮುಂದಿನ ಸಭೆಯಲ್ಲಿ ಪಠ್ಯ ಕ್ರಮಗಳನ್ನು ಅಂತಿಮಗೊಳಿಸಲು ರ್ಧರಿಸಲಾಯಿತು.

ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು 2018-19 ರ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲು ಹಾಗೂ ಈ ವಿಭಾಗದಲ್ಲಿ ಪೂರಕವಾಗುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಧ್ಯಾ ತರಗತಿಗಳನ್ನು ನಡೆಸುವ ಬಗ್ಗೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಕ್ರಮವಹಿಸುವುದಾಗಿ ಮಂಗಳೂರು ವಿ.ವಿ ಮುಖ್ಯಸ್ಥರು ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ. ಸಿ ಭಂಡಾರಿಯವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News