ಕರ್ನಾಟಕದಲ್ಲಿ ಬಹುಮತವಿಲ್ಲದೆ ಸರಕಾರ ರಚನೆ: ಬಿಜೆಪಿಗೆ ಶತ್ರುಘ್ನ ಸಿನ್ಹಾ ತರಾಟೆ

Update: 2018-05-17 13:58 GMT

ಪಾಟ್ನಾ,ಮೇ 17: ಅಗತ್ಯ ಬಹುಮತವಿಲ್ಲದೆ ಕರ್ನಾಟಕದಲ್ಲಿ ಸರಕಾರವನ್ನು ರಚಿಸುವ ಬಿಜೆಪಿಯ ನಿರ್ಧಾರವನ್ನು ಗುರುವಾರ ಪ್ರಶ್ನಿಸಿರುವ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಅವರು,ಜನಶಕ್ತಿಯನ್ನು ಮೀರಿ ಧನಶಕ್ತಿಯ ರಾಜಕೀಯವು ಸ್ವೀಕಾರಾರ್ಹವಲ್ಲ,ಅಪೇಕ್ಷಣೀಯವೂ ಅಲ್ಲ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು,ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಚುನಾವಣೋತ್ತರ ಮೈತ್ರಿಯು ಬಹುಮತವನ್ನು ಹೊಂದಿರುವುದರಿಂದ ಸರಕಾರವನ್ನು ರಚಿಸಲು ಅದಕ್ಕೆ ಅವಕಾಶ ನೀಡಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.

‘‘ನಾವೇಕೆ ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆ? ಪ್ರಜಾಪ್ರಭುತ್ವದ ಪ್ರತಿಪಾದಕರು ವ್ಯವಸ್ಥೆಯ ಅಣಕವಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಉಪದೇಶ ನೀಡಲು ಮರೆಯದ ಜನರು ಪ್ರಭುತ್ವ ವ್ಯವಸ್ಥೆಯನ್ನೇ ಧ್ವಂಸಗೊಳಿಸಲು ಮುಂದಾಗಿದ್ದಾರೆ. ಜನಶಕ್ತಿಯನ್ನು ಮೆಟ್ಟಿ ಧನಶಕ್ತಿಯಿಂದ ನಡೆಯುವ ಈ ರಾಜಕೀಯವನ್ನು ಒಪ್ಪಲು ಸಾಧ್ಯವಿಲ್ಲ,ಅದು ಅಪೇಕ್ಷಣೀಯವೂ ಅಲ್ಲ. ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿಯಲು ನೀವು ಎಲ್ಲ ಕಾಲಕ್ಕೂ ಎಲ್ಲರನ್ನೂ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಮತ್ತು ಅದು ಉಪದೇಶನೀಯವೂ ಅಲ್ಲ’’ ಎಂದು ಸಿನ್ಹಾ ಟ್ವೀಟಿಸಿದ್ದಾರೆ.

‘‘ ಇದನ್ನು ‘ಕಾಸಿಗೆ ಜಾಣ ಕೋಟಿಗೆ ಕೋಣ’ ರಾಜಕೀಯವೆಂದು ಬಣ್ಣಿಸಬಹುದು. ವಿವೇಚನೆ,ಪಕ್ವತೆ ಮತ್ತು ಬುದ್ಧಿವಂತಿಕೆ ಬದುಕಿರಲಿ ಎಂದು ಹಾರೈಸೋಣ. ಈಗ ವಿವಾದವು ನ್ಯಾಯಾಲಯದ ಮೆಟ್ಟಿಲನ್ನೇರಿದೆ. ನ್ಯಾಯಾಂಗಕ್ಕೆ ನಾವು ಅತ್ಯುನ್ನತ ಗೌರವವನ್ನು ನೀಡುತ್ತೇವೆ. ನಾವು ಕಾದು ನೋಡೋಣ. ಈಗಿನ ಪರಿಸ್ಥಿತಿಯಲ್ಲಿ ಯಾರೇ ಆದರೂ ನ್ಯಾಯವು ಉಳಿಯುತ್ತದೆ ಎಂದು ನಿಜವಾಗಿಯೂ ಬಯಸುತ್ತಾರೆ’’ ಎಂದಿರುವ ಅವರು,ರಾಮನಿಗಾಗಿದ್ದು ಕೃಷ್ಣನಿಗೂ ಆಗಬೇಕು. ಮೇಘಾಲಯ,ಮಣಿಪುರ ಮತ್ತು ಗೋವಾದಲ್ಲಿ ಯಾವ ಕ್ರಮ ಸರಿಯಾಗಿತ್ತೋ ಅದು ಕರ್ನಾಟಕಕ್ಕೂ ಸರಿಯಾಗಬೇಕು. ದೇವರು ಕರ್ನಾಟಕ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲಿ,ಜೈಹಿಂದ್’’ಎಂದು ಮುಗಿಸಿದ್ದಾರೆ.

ಈ ಮೂರು ರಾಜ್ಯಗಳಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿರದಿದ್ದರೂ ಚುನಾವಣೋತ್ತರ ಮೈತ್ರಿಯ ನೆರವಿನಿಂದ ಅದು ಸರಕಾರಗಳನ್ನು ರಚಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News