ವಿಮಾನದಲ್ಲಿ ಅಕ್ರಮ ಸಾಗಾಟ: 66.67 ಲಕ್ಷ ರೂ. ಮೌಲ್ಯದ ಚಿನ್ನ ವಶ
Update: 2018-05-17 19:56 IST
ಮಂಗಳೂರು, ಮೇ 17: ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ಸುಮಾರು ಎರಡು ಕೆಜಿ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ಕಂದಾಯ ಗುಪ್ತಚರ(ಡಿಆರ್‌ಐ)ವಿಭಾಗದ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡಲಾದ ಈ ಚಿನ್ನದ ಮೌಲ್ಯ 66.67 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ ಎಸ್‌ಜಿ 479 ಸಂಖ್ಯೆಯ ಸ್ಪೆಷಲ್ ಜೆಟ್ ವಿಮಾನದಲ್ಲಿ ಈ ಚಿನ್ನವನ್ನು ಸಾಗಾಟ ಮಾಡಲಾಗಿದೆ. ಚಿನ್ನ ಸಾಗಾಟದ ಖಚಿತ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ವಿಮಾನದಲ್ಲಿ ತಲಾ ಒಂದು ಕೆಜಿ ತೂಕದ ಎರಡು ಚಿನ್ನದ ಗಟ್ಟಿಗಳು ಹಾಗೂ ಒಂದು ಸಣ್ಣ ಚಿನ್ನದ ಗಟ್ಟಿ ಪತ್ತೆಯಾಗಿದೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವಿಮಾನದ ಶೌಚಾಲಯದ ಮೇಲ್ಬಾಗದಲ್ಲಿ ಈ ಚಿನ್ನ ಬಚ್ಚಿಡಲಾಗಿತ್ತು.