×
Ad

ಕರ್ನಾಟಕದ ರಾಜ್ಯಪಾಲರು ಬಿಜೆಪಿ ಏಟೆಂಟರಂತೆ ವರ್ತಿಸುತ್ತಿದ್ದಾರೆ: ಜೆ.ಆರ್.ಲೋಬೊ

Update: 2018-05-17 19:59 IST

ಮಂಗಳೂರು, ಮೇ 17: ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಕರ್ನಾಟಕದ ರಾಜ್ಯಪಾಲರು ಬಿಜೆಪಿ ಏಟೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ನಗರದ ಪುರಭವನ ಬಳಿಯ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಎರಡು ಜಾತ್ಯತೀತ ಪಕ್ಷಗಳು ಒಂದಾಗಿ ಸರಕಾರ ರಚನೆಗೆ ಬೇಕಾದ ಶಾಸಕರ ಸಂಖ್ಯೆಯನ್ನು ರಾಜ್ಯಪಾಲರ ರಾಜ್ಯಪಾಲರ ಮುಂದಿಡಲಾಗಿದೆ. ಆದರೂ ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ನೀಡದಿರುವುದು ಖಂಡನೀಯ. ರಾಜ್ಯಪಾಲರ ಹುದ್ದೆಯು ಗೌರವಾನ್ವಿತವಾಗಿದೆ. ಆ ಹುದ್ದೆಯ ಘನತೆಯನ್ನು ಉಳಿಸಿಕೊಂಡು ಪ್ರಜಾ ಪ್ರಭುತ್ವ ವೌಲ್ಯಗಳನ್ನು ಅವರು ಎತ್ತಿ ಹಿಡಿಯಬೇಕು. ಜಾತ್ಯತೀತ ಪಕ್ಷಗಳ ಬಹುಮತವನ್ನು ಅಂಗೀಕರಿಸಿ ಸರಕಾರ ರಚನೆಗೆ ಅವಕಾಶ ನೀಡಲಿ ಎಂದು ಲೋಬೊ ಒತ್ತಾಯಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕರ್ನಾಟಕದ ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿರುವುದು ಸರಿಯಲ್ಲ. ಅವರು ಕೇಂದ್ರ ಸರಕಾರದ ಸೂಚನೆಯಂತೆ ಕುಣಿಯುತ್ತಿದ್ದಾರೆ. ರಾಜ್ಯಪಾಲರು ತಮ್ಮ ಘನೆತೆಗೆ ಚ್ಯುತಿ ಬಾರದಂತೆ ವರ್ತಿಸಲಿ ಎಂದರು.ಕಾರ್ಪೊರೇಟರ್ ಲತೀಫ್ ಕಂದಕ್ ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ,ಶಾಲೆಟ್ ಪಿಂಟೊ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News