×
Ad

ಮೋದಿಯಿಂದ ಅಕ್ರಮ ದಾರಿ ಮೂಲಕ ಅಧಿಕಾರಕ್ಕೇರುವ ಯತ್ನ: ಸೊರಕೆ

Update: 2018-05-17 20:09 IST

ಉಡುಪಿ, ಮೇ 17: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕರ್ನಾಟಕದ ರಾಜ್ಯಪಾಲರು ಅಕ್ರಮ ದಾರಿಯ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲ ಅವರ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಗೋವಾ, ಮಣಿಪುರದಲ್ಲಿ ಒಂದು ನೀತಿ, ಕರ್ನಾಟಕದಲ್ಲಿ ಒಂದು ನೀತಿ ಅನುಸರಿಸುವುದು ಸರಿಯಲ್ಲ. 104 ಸಂಖ್ಯಾಬಲ ಇರುವ ಬಿಜೆಪಿ ಅವಕಾಶ ನೀಡುವ ಮೂಲಕ ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಚಾಲನೆ ನೀಡಿದ್ದಾರೆ. ಆದುದರಿಂದ ನಾವು ಸಂವಿಧಾನವನ್ನು ಕಾಪಾಡುವ ಕೆಲಸ ಮಾಡಬೇಕು. ಇದಕ್ಕಾಗಿ ನಾವು ಜೈಲಿಗೆ ಹೋಗಲು ಕೂಡ ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ನೀಡುವ ಮೂಲಕ ರಾಜ್ಯಪಾಲರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಿದ್ದಾರೆ. ಕರ್ನಾಟಕದ ಈ ಬೆಳವಣಿಗೆ ನೋವು ತಂದಿದೆ. ಇಂತಹ ಘಟನೆಗಳು ಕನ್ನಡಿಗರಿಗೆ ಶೋಭೆ ತರುವಂತದಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ರಾಜ್ಯಪಾಲರು ಮೋದಿಯವರ ಕೈಗೊಂಬೆಯಾಗಿ ವರ್ತಿಸಿದ್ದಾರೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಬಿಜೆಪಿ ಅಧಿಕಾರ ಸ್ವೀಕಾರ ಮಾಡಿದ ಕ್ಷಣದಿಂದಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದನ್ನು ನಾವು ತೀವ್ರವಾಗಿ ಖಂಡಿಸು ತ್ತೇವೆ. ಇದೇ ರೀತಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮುಂದುವರೆದಿರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಮತ್ತು ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ, ಇಂದು ಕರ್ನಾಟಕ ರಾಜ್ಯಕ್ಕೆ ಕರಾಳ ದಿನ. ಸಂವಿಧಾನ ಬಾಹಿರವಾಗಿ ಬಿಜೆಪಿಗೆ ಸರಕಾರ ರಚನೆ ಮಾಡಲು ಆಹ್ವಾನ ನೀಡಿರುವುದು ಪ್ರಜಾಪ್ರಭುತ್ವವನ್ನೇ ಕೊಲೆ ಮಾಡಿದಂತೆ. ಇದರ ಹಿಂದಿನ ಶಕ್ತಿ ನರೇಂದ್ರ ಮೋದಿ. ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ದೇಶದ ದುರಂತ ಎಂದು ತಿಳಿಸಿದರು.

ಇದಕ್ಕೂ ಮುನ್ನ ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಅಜ್ಜರಕಾಡುವಿನ ವರೆಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಕೇಶ್ ಮಲ್ಲಿ, ಸತೀಶ್ ಅಮೀನ್ ಪಡುಕೆರೆ, ನವೀನ್‌ಚಂದ್ರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ವರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಸರಳ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜನಾರ್ದನ ಭಂಡಾರ್ಕರ್, ನರಸಿಂಹಮೂರ್ತಿ, ಕಾಪು ದಿವಾಕರ ಶೆಟ್ಟಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಹರೀಶ್ ಕಿಣಿ, ಯತೀಶ್ ಕರ್ಕೇರ, ರಮೇಶ್ ಕಾಂಚನ್, ಎಂ.ಪಿ.ಮೊದಿನಬ್ಬ, ಸರಸು ಡಿ.ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

‘ಸಾಲಮನ್ನಾಕ್ಕೆ ಯಾವುದೇ ಮಹತ್ವ ಇಲ್ಲ’
ಯಡಿಯೂರಪ್ಪ ಮಾಡಿರುವ ಸಾಲ ಮನ್ನಾಕ್ಕೆ ಯಾವುದೇ ಮಹತ್ವ ಇಲ್ಲ. ಸಾಲ ಮನ್ನಾ ಆಗಬೇಕಾದರೆ ಸಚಿವ ಸಂಪುಟ ನಿರ್ಧಾರ ಆಗಬೇಕು. ಆದರೆ ಇಲ್ಲಿ ಸಚಿವ ಸಂಪುಟವೇ ಅಸ್ತಿತ್ವಕ್ಕೆ ಬಂದಿಲ್ಲ. ಅದು ಬರುವುದು ಕೂಡ ಇಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂಬುದು ಇನ್ನು ಸಾಬೀತಾಗಿಲ್ಲ ಎಂದು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.

ನಾವು ಸಾಬೀತು ಮಾಡುವಾಗ 120ಕ್ಕಿಂತ ಹೆಚ್ಚು ಶಾಸಕರು ನಮ್ಮ ಜೊತೆ ಇರುತ್ತಾರೆ. ಯಾರು ಕೂಡ ಮಿಸ್ಸಿಂಗ್ ಆಗಿಲ್ಲ. ಅದು ಕೇವಲ ವಾಟ್ಸಾಪ್ ನಲ್ಲಿ ಮಾತ್ರ ಮಿಸ್ಸಿಂಗ್ ಆಗಿರುವುದು. ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಎಲ್ಲ ಶಾಸಕರು ನಮ್ಮ ಜೊತೆಯೇ ಇದ್ದಾರೆ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News