×
Ad

ಉಡುಪಿ: ಶಿರಡಿ ಸಾಯಿಬಾಬಾ ಪಾದುಕ ದರ್ಶನಂ

Update: 2018-05-17 20:33 IST

ಉಡುಪಿ, ಮೇ 17: ಶಿರಡಿ ಸಾಯಿಬಾಬಾರ ಮೂಲ ಸಂಸ್ಥಾನದಲ್ಲಿ ಸಮಾಧಿಗೆ 100 ವರ್ಷ ತುಂಬಿದ ಪ್ರಯುಕ್ತ ಸಾಯಿಬಾಬಾ ಧರಿಸಿದ ಪಾದುಕೆ ಯನ್ನು ದೇಶದ ಆಯ್ದ ಭಾಗಗಳಲ್ಲಿ ಸಾರ್ವಜನಿಕರ ಹಾಗೂ ಭಕ್ತರ ವೀಕ್ಷಣೆಗಾಗಿ ‘ಪಾದುಕಾ ದರ್ಶನಂ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಮೇ 24 ಮತ್ತು 25ರಂದು ಉಡುಪಿಯಲ್ಲಿರುತ್ತದೆ ಎಂದು ಶ್ರೀಸಾಯಿಬಾಬಾ ಪಾದುಕಾ ದರ್ಶನ ವ್ಯವಸ್ಥಾಪನಾ ಸಮಿತಿಯ ಕಾರ್ಯಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಕೊಡವೂರಿನ ಸಾಯಿಬಾಬಾ ನಗರದ ತೋಟದಮನೆಯಲ್ಲಿರುವ ಶಿರಡಿ ಶ್ರೀಸಾಯಿಬಾಬಾ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಉಡುಪಿಯಲ್ಲಿ ಪ್ರಥಮ ಬಾರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಅವರ ಮೂಲ ಪಾದುಕೆಯನ್ನು ಮೇ 24ರ ಸಂಜೆ 4 ಗಂಟೆಗೆ ಉಡುಪಿಯ ಜೋಡುಕಟ್ಟೆಯಲ್ಲಿ ಸ್ವಾಗತಿಸಿ ವೈಭವನದ ಮೆರವಣಿಗೆಯಲ್ಲಿ ಕೊಡವೂರಿನ ಸಾಯಿಬಾಬ ಮಂದಿರಕ್ಕೆ ಕೊಂಡೊಯ್ಯಲಾಗುವುದು ಎಂದವರು ನುಡಿದರು.

ಮೆರವಣಿ ಜೋಡುಕಟ್ಟೆಯಿಂದ ಡಯಾನ ಸರ್ಕಲ್, ಕೆಎಂ ಮಾರ್ಗದ ಮೂಲಕ ಸರ್ವಿಸ್ ಬಸ್‌ನಿಲ್ದಾಣ, ಕಿದಿಯೂರು ಹೊಟೇಲ್, ಬನ್ನಂಜೆ ರಸ್ತೆಯಾಗಿ ಕರಾವಳಿ ಜಂಕ್ಷನ್‌ನಿಂದ ಆದಿಉಡುಪಿಗೆ ಆಗಮಿಸಿ ಅಲ್ಲಿಂದ ಕಾಲುನಡಿಗೆಯ ಮೆರವಣಿಗೆ ಮೂಲಕ ಕೊಡವೂರಿನ ಸಾಯಿಬಾಬಾ ಮಂದಿರಕ್ಕೆ ಬರಲಿದೆ ಎಂದರು.

ಮೆರವಣಿಗೆಯಲ್ಲಿ ಹಲವು ಭಜನಾ ತಂಡಗಳು, ಬಿರುದಾವಳಿ, ಸಾರೋಟು, ಶಂಖ ಜಾಗಟೆ, ಕೊಂಬು, ಡೋಲು ವಾದನ, ನಾಸಿಕ್ ಬ್ಯಾಂಡ್, ಚಿತ್ರದುರ್ಗದ ವಾದ್ಯ ಸಂಗೀತ, ಚಂಡೆವಾದನ, ನಾಗಸ್ವರಗಳಿರುತ್ತವೆ. ಸಾಯಿಬಾಬ ಮಂದಿರದಲ್ಲಿ ರಾತ್ರಿ 8ಗಂಟೆಯಿಂದ 10ರವರೆಗೆ ಪಾದುಕಾ ದರ್ಶನವಿರುತ್ತದೆ ಎಂದರು.

ಮರುದಿನ ಮೇ 25ರಂದು ಶುಕ್ರವಾರ ಬೆಳಗ್ಗೆ 8:00ರಿಂದ ರಾತ್ರಿ 10:00 ಗಂಟೆಯವರೆಗೆ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಸಾಯಿಬಾಬರ ಪಾದುಕೆ ದರ್ಶನ ಲಭ್ಯವಿರುತ್ತದೆ. ಅಲ್ಲದೇ ಭಜನೆ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳು ಸಹ ನಡೆಯಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೊಡವೂರು ದಿವಾಕರ ಶೆಟ್ಟಿ, ಸಾಯಿಈಶ್ವರ, ಈಶ್ವರ ಶೆಟ್ಟಿ ಚಿಟ್ಪಾಡಿ, ದೇವದಾಸ ಸುವರ್ಣ ಕಡೆಕಾರು, ಹರ್ಷ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News