×
Ad

ಮೇ 19ರಂದು ಉಳ್ಳಾಲ ಬಂಟರ ಭವನ ಉದ್ಘಾಟನೆ

Update: 2018-05-17 20:45 IST

ಕೊಣಾಜೆ, ಮೇ 17: ಕೊಣಾಜೆ ಗ್ರಾಮದ ಅಸೈಗೋಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಉಳ್ಳಾಲ ಬಂಟರ ಭವನ’ ದ ಉದ್ಘಾಟನೆ ಮೇ. 19ರಂದು ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಮೇ 20ರಂದು ‘ಉಳ್ಳಾಲ ಬಂಟೋತ್ಸವ‘ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಕೊಣಾಜೆ ಅಸೈಗೋಳಿಯಲ್ಲಿರುವ ಉಳ್ಳಾಲ ಬಂಟರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಮಾತನಾಡಿ ಕಳೆದ 18 ವರ್ಷಗಳಿಂದ ಬಂಟರ ಸಂಘ ಉಳ್ಳಾಲ ವಲಯ ಮತ್ತು ಅದರ ಸಹ ಸಂಘಟನೆಗಳು ಸಂಘಟನೆಯೊಂದಿಗೆ ಶೈಕ್ಷಣಿಕ ಸಹಕಾರ, ಆರೋಗ್ಯ, ಹಾಗೂ ಆರ್ಥಿಕ ಸಬಲೀಕರಣದೊಂದಿಗೆ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.

ಸಂಘದ ಧ್ಯೇಯೋದ್ಧೇಶಗಳಲ್ಲಿ ಒಂದಾಗಿರುವ ಸಮಾಜಿಕ ಚಟುವಟಿಕೆಯ ಅಂಗವಾಗಿ ಸಮಾಜಕ್ಕೆ ಸಹಕಾರ ಕೊಡುವ ನಿಟ್ಟಿನಲ್ಲಿ ಸಂಘದಲ್ಲಿ ಅಧಿಕಾರ ನಡೆಸಿದ್ದ ಎಲ್ಲಾ ಅಧ್ಯಕ್ಷರು ಪ್ರಯತ್ನ ಪಟ್ಟಿದ್ದು, ಈ ಯೋಜನೆಯ ಅಂಗವಾಗಿ 20 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಬಂಟರ ಭವನ ನಿರ್ಮಾಣಕ್ಕೆ ಪ್ರಾರಂಬಿಸಿ ಇದೀಗ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಮೇ. 19ರಂದು ಬೆಳಗ್ಗೆ ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಬಂಟರ ಭವನವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಂಟರ ಸಂಘ ಉಳ್ಳಾಲ ವಲಯ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ವಹಿಸಲಿದ್ದಾರೆ. ನಾಮಫಲಕ ಅನಾವರಣವನ್ನು ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸಲಿದ್ದು, ಮಂಗಳೂರಿನ ಶ್ರೀ ದೇವಿ ಎಜ್ಯಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಬಂಟೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಬಾಲಿವುಡ್ ಚಲನಚಿತ್ರ ನಟ ಸುನಿಲ್ ಶೆಟ್ಟಿ ಸಂಘದ ಲಾಂಛನ ಬಿಡುಗಡೆ ಮಾಡಲಿದ್ದು, ಪುಣೆಯ ಉದ್ಯಮಿ ಜಗನ್ನಾಥ ಶೆಟ್ಟಿ ಪುಣೆ ಭೋಜನ ಶಾಲೆಯನ್ನು ಉದ್ಘಾಟಿಸಲಿದ್ದು, ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ, ಸಂಜೆ 5.30ಕ್ಕೆ ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಮಾಗಮವಾದ ತುಳುವೆರೆ ಕೂಟ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದ ಎರಡನೇ ದಿನವಾದ ಮೇ. 20ರಂದು ಬೆಳಗ್ಗೆ 9.30ಕ್ಕೆ ತುಳು ಬದುಕು, ಚರಿತ್ರೆ, ಕಥೆ ನಡವಳಿಕೆಯ ‘ಪೆರ್ಮೆದ ತುಳುವೆರ್’ ವಿಷಯದಲ್ಲಿ ನಡೆಯುವ ಕಲೋತ್ಸವ ಸ್ಪರ್ಧೆ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ನೆರವೇರಿಸಲಿದ್ದು, ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಿತೇಂದ್ರ ಶೆಟ್ಟಿ ತಿಳಿಸಿದರು.

ಉಳ್ಳಾಲ ಬಂಟರ ಭವನ ನಿರ್ಮಾಣದ ರುವಾರಿ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಮಾತನಾಡಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಂಟರ ಸಂಘ ಅತ್ಯಂತ ಬಲಿಷ್ಠ ಸಮುದಾಯವಾಗಿದ್ದು ಮಾತೃ ಸಂಘ 100 ವರ್ಷವನ್ನು ಪೂರೈಸಿದ್ದು, ಮುಂಬಯಿ ಸೇರಿದಂತೆ ದೇಶದ ವಿವಿದೆಡೆ ಇರುವ ಬಂಟರ ಸಂಘಗಳು ಹಲವಾರು ವರ್ಷಗಳಿಂದ ಸಂಘಟಿತವಾಗಿದ್ದು, ಉಳ್ಳಾಲ ವಲಯದಲ್ಲಿ ನೂತನ ಸಭಾಂಗಣ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ.

ಸುಸಜ್ಜಿತ ಬಂಟರ ಭವನ : ಅಸೈಗೋಳಿಯ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಉಳ್ಳಾಲ ಬಂಟರ ಭವನದ ಸುಸಜ್ಜಿತ ಹವಾನಿಯಂತ್ರಿತ 700 ಆಸನಗಳಿರುವ ಸಭಾಂಗಣವಾಗಿದ್ದು, ವಿಶಾಲವಾದ ಪಾಕಶಾಲೆ, ಎಂಟುನೂರು ಆಸನಗಳಿರುವ ‘ಬಂಟ್ಸ್ ಗ್ಯಾಲರಿ’ಯನ್ನು ಹೊಂದಿದ್ದು ವಿಶಿಷ್ಟವಾದ ವಾಸ್ತುವಿನ್ಯಾಸದೊಂದಿಗೆ ನಿರ್ಮಾಣವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ರಘುರಾಮ ಕಾಜವ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಕೆ.ರವೀಂದ್ರ ರೈ ಕಲ್ಲಿಮಾರು, ಕೋಶಾಧಿಕಾರಿ ಸಂಜೀವ ಶೆಟ್ಟಿ ಪಡ್ಯಾರಮನೆ, ಬಂಟರ ಸಂಘ ಉಳ್ಳಾಲ ವಲಯದ ಕೋಶಾಧಿಕಾರಿ ಪುರುಷೋತ್ತಮ ಮಾಣಾ, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ ಹೊಸಮನೆ, ಜೊತೆ ಕಾರ್ಯದರ್ಶಿ ನಾರಾಯಣ ರೈ ಕಕ್ಕೆಮಜಲು, ಯುವ ವಿಭಾಗದ ಅಧ್ಯಕ್ಷ ಅಶೋಕ್ ರೈ ಮಡ್ಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News