ಪ.ಬಂಗಾಳ ಪಂಚಾಯತ್ ಚುನಾವಣೆ : ಟಿಎಂಸಿ ಮುಂದೆ, ಬಿಜೆಪಿ ಹಿಂದೆ

Update: 2018-05-17 15:29 GMT

ಕೋಲ್ಕತಾ,ಮೇ 17: ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ರಾಜ್ಯದ ಆಡಳಿತ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷವು 9,270 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದುಕೊಂಡು ಇತರ ಎಲ್ಲ ಪಕ್ಷಗಳನ್ನು ಹಿಂದಿಕ್ಕಿದೆ. ಬಿಜೆಪಿ 2,079 ಸ್ಥಾನಗಳಲ್ಲಿ ಗೆದ್ದಿದ್ದು ಹೆಚ್ಚಿನ ಜಿಲ್ಲೆಗಳಲ್ಲಿ ಟಿಎಂಸಿಗೆ ಪ್ರಬಲ ಸ್ಪರ್ಧೆ ನೀಡಿದೆ. ಸಿಪಿಎಗೆ 562 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 315 ಸ್ಥಾನಗಳು ಲಭಿಸಿವೆ. ಪಕ್ಷೇತರರು 707 ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ. ಟಿಎಂಸಿ ಅತ್ಯಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಟಿಎಂಸಿ ಈವರೆಗೆ 95 ಪಂಚಾಯತಿ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದ್ದು,65ರಲ್ಲಿ ಮುನ್ನಡೆಯಲ್ಲಿದೆ. ಇತರ ಪಕ್ಷಗಳು ಇನ್ನಷ್ಟೇ ತಮ್ಮ ಖಾತೆಗಳನ್ನು ತೆರೆಯಬೇಕಿವೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ. ಟಿಎಂಸಿ 10 ಜಿಲ್ಲಾ ಪರಿಷದ್ ಸ್ಥಾನಗಳನ್ನು ಗೆದ್ದುಕೊಂಡಿದ್ದು,25ರಲ್ಲಿ ಮುನ್ನಡೆಯಲ್ಲಿದೆ.

ಮೇ 14ರಂದು ರಾಜ್ಯದ 20 ಜಿಲ್ಲೆಗಳಲ್ಲಿ 621 ಜಿಲ್ಲಾ ಪರಿಷದ್,6,123 ಪಂಚಾಯತ್ ಸಮಿತಿ ಮತ್ತು 31,802 ಗ್ರಾಮ ಪಂಚಾಯತ್ ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು.

ಒಟ್ಟು 48,650 ಗ್ರಾ.ಪಂ.ಸ್ಥಾನಗಳ ಪೈಕಿ 16,814 ಸ್ಥಾನಗಳಿಗೆ ಯಾರೂ ಸ್ಪರ್ಧಿಸಿಲ್ಲ. ಅದೇ ರೀತಿ 9,217 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ 3,059 ಸ್ಥಾನಗಳಲ್ಲಿ ಅಭ್ಯರ್ಥಿಗಳಿಲ್ಲ. 825 ಜಿಲ್ಲಾ ಪರಿಷದ್ ಸ್ಥಾನಗಳ ಪೈಕಿ 203 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆದಿಲ್ಲ ಎಂದು ಆಯೋಗವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News