ಕಾವೇರಿ ನೀರು ನಿರ್ವಹಣಾ ಯೋಜನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2018-05-17 15:37 GMT

ಹೊಸದಿಲ್ಲಿ, ಮೇ 17: ಕಾವೇರಿ ನದಿ ನೀರನ್ನು ನಾಲ್ಕು ರಾಜ್ಯಗಳೊಳಗೆ ಹಂಚಿಕೆ ಮಾಡಲು ರೂಪಿಸಿರುವ ಕಾವೇರಿ ನೀರು ನಿರ್ವಹಣಾ ಯೋಜನೆಯನ್ನು ಅಂತಿಮಗೊಳಿಸುವ ಬಗ್ಗೆ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಕಾವೇರಿ ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ಸಂಬಂಧಪಟ್ಟ ಎಲ್ಲಾ ರಾಜ್ಯಗಳ ಸಲಹೆ, ಸೂಚನೆಗಳನ್ನು ಗಮನಿಸುವುದಾಗಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಮೇ 18ರಂದು ಆದೇಶ ಹೊರಡಿಸಲಿದ್ದೇವೆ. ಅದು ಸಾಧ್ಯವಾಗದಿದ್ದರೆ ಮೇ 22 ಅಥವಾ 23ರಂದು ಆದೇಶ ಹೊರಡಲಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. 

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ನ್ಯಾಯಪೀಠದ ಇತರ ಸದಸ್ಯರಾಗಿದ್ದಾರೆ. ನದಿಯಲ್ಲಿ ಅವಿರತ ನೀರಿನ ಚಲನೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಲಾಶಯದಲ್ಲಿ ಕನಿಷ್ಟ ನೀರಿನ ಮಟ್ಟ ಕಾಯ್ದುಕೊಳ್ಳಲು ಕರ್ನಾಟಕ ಹಾಗೂ ತಮಿಳುನಾಡಿಗೆ ಕಾವೇರಿ ಜಲವಿವಾದ ಮಂಡಳಿ(ಸಿಡಬ್ಲೂಡಿಟಿ) ಅನುವು ಮಾಡಿಕೊಟ್ಟಿತ್ತು. ಆದರೆ ಈಗ ಸಲ್ಲಿಸಲಾಗಿರುವ ಕರಡು ಯೋಜನೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ ಎಂದು ಕರ್ನಾಟಕ ಸರಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ನ್ಯಾಯಪೀಠಕ್ಕೆ ತಿಳಿಸಿದರು.

ನೀರು ಹಂಚಿಕೆ ವಿಷಯದಲ್ಲಿ ಕಾಲಕಾಲಕ್ಕೆ ನಿರ್ದೇಶನವನ್ನು ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡಲು ಯೋಜನೆಯಲ್ಲಿ ಮಾರ್ಪಾಟು ಮಾಡಲಾಗಿದೆ ಎಂದು ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದರು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕಾಲಕಾಲಕ್ಕೆ ನಿರ್ದೇಶನ ನೀಡಲು ಕೇಂದ್ರ ಸರಕಾರಕ್ಕೆ ಅಧಿಕಾರ ನೀಡುವ ಕರಡು ಯೋಜನೆಯ ಕೆಲವು ವಿಷಯಗಳನ್ನು ಮಾರ್ಪಾಟು ಮಾಡಿ ಸರಿಪಡಿಸುವಂತೆ ಉಚ್ಛನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನೀರು ಸಹಜ ಸ್ಥಿತಿಯಲ್ಲಿರುವಾಗ ಹಾಗೂ ಕೊರತೆಯಿರುವ ಸಂದರ್ಭದಲ್ಲಿ ನಾಲ್ಕು ರಾಜ್ಯಗಳೊಳಗೆ ನೀರನ್ನು ನ್ಯಾಯಯುತ ರೀತಿಯಲ್ಲಿ ಹಂಚಿಕೆ ಮಾಡುವ ಯೋಜನೆ ಇದೀಗ ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಅಂತಿಮ ಆದೇಶವನ್ನು ಎದುರು ನೋಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News