×
Ad

ವಿಮಾನ ವಿಳಂಬ: ಏರ್ ಇಂಡಿಯಾಗೆ 59.61 ಕೋ.ರೂ. ದಂಡ ?

Update: 2018-05-17 21:23 IST

ಹೊಸದಿಲ್ಲಿ, ಮೇ 17: ಮೇ 9ರಂದು ದಿಲ್ಲಿ-ಶಿಕಾಗೊ ಮಧ್ಯೆ ಸಂಚರಿಸುತ್ತಿದ್ದ ವಿಮಾನದ ಯಾನ ವಿಳಂಬವಾದ ಕಾರಣ ಏರ್‌ಇಂಡಿಯಾ ಸಂಸ್ಥೆಗೆ ಒಟ್ಟು 59.61 ಕೋಟಿ ರೂ. ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮೇ 9ರಂದು ದಿಲ್ಲಿಯಿಂದ ಅಮೆರಿಕದ ಶಿಕಾಗೊಗೆ 323 ಪ್ರಯಾಣಿಕರ ಸಹಿತ ಪ್ರಯಾಣ ಆರಂಭಿಸಿದ ವಿಮಾನ 16 ಗಂಟೆಗಳ ಪ್ರಯಾಣದ ಅವಧಿಯ ಬಳಿಕ ಶಿಕಾಗೊ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಪ್ರಕ್ಷುಬ್ಧ ಹವಾಮಾನದ ಕಾರಣ ಅಲ್ಲಿ ಇಳಿಯಲಾಗದೆ, ಸಮೀಪದ ಮಿಲ್‌ವೋಕಿ ನಿಲ್ದಾಣದತ್ತ ವಿಮಾನ ಸಾಗಿತ್ತು. ಶಿಕಾಗೊದಿಂದ ಮಿಲ್‌ವೋಕಿಗೆ ವಿಮಾನ ಪ್ರಯಾಣದ ಅವಧಿ 19 ನಿಮಿಷವಾಗಿದೆ.

ವಿಮಾನ ಸಿಬ್ಬಂದಿಗಳ ಕರ್ತವ್ಯದ ಅವಧಿಯ ವಾಯಿದೆಯ ವಿನಾಯಿತಿ ಹಿಂಪಡೆದ ಕಾರಣ ವಿಮಾನದ ಸಿಬ್ಬಂದಿಗಳಿಗೆ ಆ ದಿನ ಕೇವಲ ಒಮ್ಮೆ ಮಾತ್ರ ಇಳಿಯಲು ಅನುಮತಿ ನೀಡಲಾಗಿತ್ತು(ಒಂದು ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ಬೇರೆ ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಕಿತ್ತು) . ಈ ಹಿನ್ನೆಲೆಯಲ್ಲಿ ಶಿಕಾಗೊದಿಂದ ಬೇರೆ ಸಿಬ್ಬಂದಿಗಳನ್ನು ರಸ್ತೆಮಾರ್ಗದ ಮೂಲಕ ಮಿಲ್‌ವೋಕಿಗೆ ಸಾಗಿಸಿ, ಅಲ್ಲಿಂದ ವಿಮಾನ ಶಿಕಾಗೊಗೆ ಮರುಪ್ರಯಾಣ ಬೆಳೆಸುವಾಗ 6 ಗಂಟೆಗೂ ಅಧಿಕ ಸಮಯದ ವಿಳಂಬವಾಗಿದ್ದು ಈ ವೇಳೆ ವಿಮಾನದ ಒಳಗೆಯೇ ಪ್ರಯಾಣಿಕರು ಕಾಲ ಕಳೆಯುವಂತಾಗಿತ್ತು. ಆದರೆ ಅಮೆರಿಕದ ಮಾರ್ಗದರ್ಶಿ ಸೂತ್ರದ ಪ್ರಕಾರ , ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರ ಸಹಿತ ನಿಲ್ದಾಣದ ನಿಗದಿತ ಸ್ಥಳದಲ್ಲಿ ನಾಲ್ಕು ಗಂಟೆಗಿಂತ ಅಧಿಕ ವೇಳೆ ನಿಂತಿದ್ದರೆ ವಿಮಾನಯಾನ ಸಂಸ್ಥೆಯನ್ನು ದೋಷಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತೀ ಪ್ರಯಾಣಿಕನಿಗೆ 18.62 ಲಕ್ಷ ರೂ. ಪರಿಹಾರ ನೀಡಬೇಕಾಗುತ್ತದೆ.

ವಿಮಾನದಲ್ಲಿ 323 ಪ್ರಯಾಣಿಕರಿದ್ದ ಕಾರಣ ಏರ್‌ಇಂಡಿಯಾ 59.61 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ. 323 ಪ್ರಯಾಣಿಕರಲ್ಲಿ 41 ಮಂದಿ ಗಾಲಿಕುರ್ಚಿಯ ಆಧಾರದಲ್ಲಿ ನಡೆದಾಡುವವರು, ಎರಡು ನವಜಾತ ಶಿಶುವಿದ್ದರೆ, ಇನ್ನೊಂದು ಮಗು ಸ್ವಲೀನತೆಯ ಕಾಯಿಲೆ(ಆಟಿಸಂ)ಯಿಂದ ಬಳಲುತ್ತಿದ್ದು ಅದು ಮಿಲ್‌ವೋಕಿಯಲ್ಲಿ ತೀವ್ರ ತೊಂದರೆಗೊಳಗಾದಾಗ ವೈದ್ಯರನ್ನು ಕರೆಸಲಾಗಿತ್ತು.

ದಂಡ ಪಾವತಿಯ ವಿಷಯವನ್ನು ಉಲ್ಲೇಖಿಸಿ ಏರ್‌ಇಂಡಿಯಾ ಸಂಸ್ಥೆ ಹಾಗೂ ಭಾರತೀಯ ವಿಮಾನಯಾನ ಸಂಸ್ಥೆಗಳ ಸಂಘಟನೆ ದಿಲ್ಲಿ ಹೈಕೋರ್ಟ್‌ಗೆ ಮೇ 15ರಂದು ಅರ್ಜಿ ಸಲ್ಲಿಸಿದೆ. ಜೆಟ್ ಏರ್‌ವೇಸ್, ಸ್ಪೈಸ್ ಜೆಟ್ ಹಾಗೂ ಗೋ ಏರ್ ಸಂಸ್ಥೆಗಳು ಸಂಘಟನೆಯ ಸದಸ್ಯರಾಗಿದ್ದು ವಿಮಾನ ಸಿಬ್ಬಂದಿಗಳ ಕರ್ತವ್ಯದ ಅವಧಿಯ ವಾಯಿದೆಯ ವಿನಾಯಿತಿ ಹಿಂಪಡೆಯುವ ಎಪ್ರಿಲ್ 18ರ ನಿರ್ದೇಶನಕ್ಕೆ ಮಾರ್ಪಾಡು ಮಾಡುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News