2017ರ ಅತ್ಯುತ್ತಮ ‘ಫೇಸ್‌ಬುಕ್’ ಪುಟ ಕೇರಳ ಪ್ರವಾಸೋದ್ಯಮ ಇಲಾಖೆಗೆ ಅಗ್ರಸ್ಥಾನ

Update: 2018-05-17 17:19 GMT

ತಿರುವನಂತಪುರಂ, ಮೇ 17: ಖ್ಯಾತ ಸಾಮಾಜಿಕ ಮಾಧ್ಯಮ ಸಂಸ್ಥೆ ‘ಫೇಸ್‌ಬುಕ್’ ಪ್ರಕಟಿಸಿದ ಭಾರತದ ಆಕರ್ಷಕ ಪ್ರವಾಸೀ ತಾಣಗಳಲ್ಲಿ ಕೇರಳ ಪ್ರವಾಸೋದ್ಯಮ ಫೇಸ್‌ಬುಕ್ ಪುಟ 1.5 ಮಿಲಿಯ ಲೈಕ್ಸ್ ಪಡೆದು , 2017ರ ಸಾಲಿನಲ್ಲಿ ಅಗ್ರಸ್ಥಾನ ಪಡೆದಿದೆ.

ದೇವರ ಸ್ವಂತ ನಾಡು ಎಂಬ ಹೆಗ್ಗಳಿಕೆ ಹೊಂದಿರುವ ಕೇರಳದಲ್ಲಿ ಆಕರ್ಷಕ ಬೀಚ್‌ಗಳು, ಪ್ರಕೃತಿ ಸೌಂದರ್ಯ ಮೇಳೈಸಿದ ಹಿನ್ನೀರಿನ ವೈಭವದಿಂದ 2017ರ ಜನವರಿ 1ರಿಂದ ಡಿ.31ರವರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಿದೆ. ಭೇಟಿ ನೀಡಿರುವ ಪ್ರವಾಸಿಗಳ ಪ್ರತಿಕ್ರಿಯೆ, ಸಲಹೆ, ಟಿಪ್ಪಣಿಯನ್ನಾಧರಿಸಿ ಶ್ರೇಯಾಂಕ ನೀಡಲಾಗಿದೆ. ಜಮ್ಮು ಕಾಶ್ಮೀರ ದ್ವಿತೀಯ ಸ್ಥಾನ, ಗುಜರಾತ್ ತೃತೀಯ ಸ್ಥಾನ ಪಡೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಹೊಸದಿಲ್ಲಿಯಲ್ಲಿರುವ ಫೇಸ್‌ಬುಕ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೇಸ್‌ಬುಕ್‌ನ ಸಾರ್ವಜನಿಕ ಕಾರ್ಯನೀತಿಯ ವ್ಯವಸ್ಥಾಪಕ (ಭಾರತ, ದಕ್ಷಿಣ ಮತ್ತು ಕೇಂದ್ರ ಏಶ್ಯಾ) ನಿತಿನ್ ಸಲೂಜಾ ಕೇರಳದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಪಿ.ಬಾಲಕಿರಣ್ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.

ಈ ಸಾಧನೆಗಾಗಿ ಕೇರಳದ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಣಿ ಜಾರ್ಜ್ ಅಭಿನಂದನೆ ಸಲ್ಲಿಸಿದ್ದಾರೆ.ಫೇಸ್‌ಬುಕ್ ಮಾಧ್ಯಮದ ಮೂಲಕ ಕೇರಳದ ಪ್ರವಾಸೋದ್ಯಮಕ್ಕೆ ವಿಶ್ವಮಟ್ಟದಲ್ಲಿ ಹೆಚ್ಚಿನ ಮನ್ನಣೆ ದೊರೆತಿದೆ ಎಂದು ರಾಣಿ ಜಾರ್ಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News