ಮಧ್ಯಪ್ರದೇಶದಲ್ಲಿ ಮರುಕಳಿಸಿದ 'ನಿರ್ಭಯಾ' ಪ್ರಕರಣ
ಭೋಪಾಲ್, ಮೇ 18: 28 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ಬಿಯರ್ ಮತ್ತು ತಂಪು ಪಾನೀಯದ ಬಾಟಲಿ ತುರುಕಿ ಚಿತ್ರಹಿಂಸೆ ನೀಡಿ, ಸಾಯಿಸಿರುವ ಪೈಶಾಚಿಕ ಪ್ರಕರಣ ಭೋಪಾಲ್‌ನ ಪ್ರಗತಿ ನಗರದಲ್ಲಿ ಬೆಳಕಿಗೆ ಬಂದಿದೆ.
ನಗ್ನಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹ ಗುರುವಾರ ಆಕೆ ವಾಸಿಸುತ್ತಿದ್ದ ಬಾಡಿಗೆ ಕೊಠಡಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿರುವುದು ಮರಣೋತ್ತರ ಪರೀಕ್ಷೆ ವೇಳೆ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಶೆಹೋರ್ ಜಿಲ್ಲೆಯ ಇಚ್ಚಾವರ್ ಪಟ್ಟಣ ಮೂಲದವರಾದ ಈ ಮಹಿಳೆ ಭೋಪಾಲ್‌ನ ಪ್ರಗತಿ ನಗರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಮುರಿದು ನೋಡಿದಾಗ ಮಹಿಳೆಯ ದೇಹ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆಯೇ ಆಕೆಯ ಕೊಲೆಯಾಗಿರಬೇಕು ಎಂದು ಶಂಕಿಸಲಾಗಿದೆ.
ಬಡ ಕುಟುಂಬಕ್ಕೆ ಸೇರಿದ ಮಹಿಳೆ ಒಂದು ಕೊಠಡಿ ಬಾಡಿಗೆಗೆ ಪಡೆದು ಪತಿಯೊಂದಿಗೆ ವಾಸವಿದ್ದರು. ಮಹಿಳೆ ಗೃಹಿಣಿಯಾಗಿದ್ದು, ಪತಿ ಕೂಲಿ ಕಾರ್ಮಿಕನಾಗಿದ್ದ. ಸೌದಿ ಅರೇಬಿಯಾದಲ್ಲಿ ವಾಸವಿರುವ ವ್ಯಕ್ತಿಯ ಮನೆಯಲ್ಲಿ ಈ ದಂಪತಿ ವಾಸವಿತ್ತು. ಘಟನೆಯ ಬಳಿಕ ಪತಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.