ಮೇ 19- ಜೂ.30: 'ಸಿಟಿ ಸೆಂಟರ್‌'ನಲ್ಲಿ ಶಾಪಿಂಗ್ ಉತ್ಸವ

Update: 2018-05-18 08:10 GMT

ಮಂಗಳೂರು, ಮೇ 18: ನಗರದ ಪ್ರಮುಖ ಶಾಪಿಂಗ್ ಮಾಲ್ ಸಿಟಿ ಸೆಂಟರ್‌ನಲ್ಲಿ ಮೇ 19ರಿಂದ ಜೂನ್ 30ರವರೆಗೆ ‘ಇಂಡಲ್ಜ್’ ಎಂಬ ಹೆಸರಿನಲ್ಲಿ ವಿಶೇಷ ಶಾಪಿಂಗ್ ಉತ್ಸವವನ್ನು ಆಯೋಜಿಸಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಿಟಿ ಸೆಂಟರ್ ಆಡಳಿತ ನಿರ್ದೇಶಕ ಎಸ್.ಎಂ.ಅರ್ಶದ್, ಸಿಟಿ ಸೆಂಟರ್‌ನ 8ನೆ ವಾರ್ಷಿಕೋತ್ಸವದ ಅಂಗವಾಗಿ ಉತ್ಸವ ನಡೆಸಲಾಗುತ್ತಿದೆ ಎಂದರು.

ಗ್ರಾಹಕರನ್ನು ಶಾಪಿಂಗ್‌ಗೆ ಆಕರ್ಷಿಸಲು 42 ದಿನಗಳ ಈ ಉತ್ಸವದಲ್ಲಿ ಆಕರ್ಷಕ ಉಡುಗೊರೆಗಳನ್ನು ಗೆಲ್ಲಲು ಅವಕಾಶ ಕಲ್ಪಿಸಲಾಗಿದೆ. ಶಾಪಿಂಗ್ ಉತ್ಸವದ ಎಲ್ಲಾ ದಿನಗಳಲ್ಲೂ ಆಕರ್ಷಕ ಗಿಫ್ಟ್ ಗ್ರಾಹಕರಿಗೆ ಲಭ್ಯವಿರುತ್ತದೆ. ಬೇಸಿಗೆ ರಜಾ ಕೊನೆಯ ಹಂತದಲ್ಲಿ ಮಕ್ಕಳಿಗಾಗಿ ಒಂದು ವಾರದ ವಿಶೇಷ ಮಕ್ಕಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನಪ್ರಿಯ ಕಾರ್ಟೂನ್ ಪಾತ್ರಗಳಾದ ಡೊರೆಮನ್, ವಿನ್ನಿ ದಿ ಪೂಹ್ ಮತ್ತು ಛೋಟಾ ಭೀಮ್ ಸಿಟಿ ಸೆಂಟರ್‌ಗೆ ಭೇಟಿ ನೀಡಿ ಮಕ್ಕಳನ್ನು ರಂಜಿಸಲಿದ್ದಾರೆ ಎಂದು ಅವರು ಹೇಳಿದರು.

ರಮಝಾನ್ ತಿಂಗಳ ಗೌರವಾರ್ಥವಾಗಿ ಸಿಟಿ ಸೆಂಟರ್‌ನಲ್ಲಿ ಆಹಾರ ಉತ್ಸವವನ್ನು ಆಯೋಜಿಸಲಾಗಿದೆ. ಸಿಟಿ ಸೆಂಟರ್‌ನಲ್ಲಿ ಇರುವ ಎಲ್ಲ ಆಹಾರ ಕೌಂಟರ್‌ಗಳು ತಮ್ಮಲ್ಲಿ ತಯಾರಿಸಲಾಗುವ ವಿಶೇಷ ಆಹಾರಗಳನ್ನು ಉಚಿತವಾಗಿ ಮಂಗಳೂರು ನಗರದ ಎನ್‌ಜಿಓ ಒಂದಕ್ಕೆ ನೀಡುವ ಕೆಲಸವನ್ನು ಕೂಡಾ ಮಾಡಲಿದೆ. ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ನಗರದ ಹಲವು ಪ್ರಮುಖ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳ ನೆರವಿನೊಂದಿಗೆ ಸಿಎಸ್‌ಆರ್ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಿದ್ದೇವೆ. ಎಂಸಿಒಡಿಎಸ್‌ನಲ್ಲಿ ಡೆಂಟಲ್ ಚೆಕ್ ಅಪ್ ಜೂ. 20ರಂದು ಡಾ.ಮೋಹನ್ ಅವರ ಕ್ಲಿನಿಕ್‌ನಲ್ಲಿ ರಕ್ತದಾನ ಶಿಬಿರ ಜೂ. 23ರಂದು, ಎಜೆ ಆಸ್ಪತ್ರೆ ವತಿಯಿಂದ ಅಂಗಾಗ ದಾನ ಜಾಗೃತಿ ಶಿಬಿರ ಜೂನ್ 16ರಂದು, ಎಜೆ ಆಸ್ಪತ್ರೆಯ ವತಿಯಿಂದ ಕ್ಯಾನ್ಸರ್ ಜಾಗೃತಿ ಶಿಬಿರ ಜೂ.10ರಂದು ಇಂಡಿಯಾನಾ ಆಸ್ಪತ್ರೆಯ ವತಿಯಿಂದ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಜೂ.3ರಂದು ನಡೆಯಲಿದೆ. ಮತ್ತೊಂದು ಸಿಎಸ್‌ಆರ್ ಕಾರ್ಯಕ್ರಮವಾಗಿ ಕಲೆಯಿಂದ ನಿಧಿ ಸಂಗ್ರಹ ಕಾರ್ಯಕ್ರಮ ನಡೆಯಲಿದೆ. ನಗರದ ಹಲವಾರು ಎನ್‌ಜಿಓಗಳ ಸದಸ್ಯರು ತಮ್ಮ ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗುವುದು.

* ಮೇ 19ರಂದು ತಾಮಾಷಾ ಫ್ಯಾಕ್ಟರಿಯಿಂದ ಸ್ಟಾಂಡ್ ಅಪ್ ಹಾಸ್ಯ.

* ಮೇ 20-27ರವರೆಗೆ ಕಾರ್ಟೂನ್ ಪಾತ್ರಗಳೊಂದಿಗೆ ಕಿಡ್ಸ್ ಈವೆಂಟ್.

* ಜೂ. 2ರಂದು ವಿಶ್ವ ಪರಿಸರ ದಿನದ ರಸಪ್ರಶ್ನೆ.

* ಜೂ.9ರಂದು ಅಗತ್ಯವಿರುವವರಿಗಾಗಿ ಚಾರಿಟಿಗೆ ಚಾಲನೆ.

* ಜೂ. 17ರಂದು ಮಸಾಲ ಕಾಫಿ ತಂಡದಿಂದ ಸಂಗೀತ ಕಾರ್ಯಕ್ರಮ.

* ಜೂ. 24ರಂದು ಫ್ಲಾಶ್ ಮಾಬ್.

* ಜೂ. 30ರಂದು ರೋಲ್ ಬ್ಯಾಂಡ್ ತಂಡದಿಂದ ಸಂಗೀತ ಕಾರ್ಯಕ್ರಮ.

ಇದಲ್ಲದೆ ಉತ್ಸವದ ಸಂದರ್ಭ ಶಾಂಪಿಂಗ್ ಮಾಡುವ ಗ್ರಾಹಕರಿಗೆ ನಾಲ್ಕು ದ್ವಿಚಕ್ರ ವಾಹನಗಳನ್ನು ಗೆಲ್ಲುವ ಅವಕಾಶವಿದೆ. ರೆನಾಲ್ಟ್ ಕ್ವಿಡ್ ಅನ್ನು ಬಂಪರ್ ಬಹುಮಾನವಾಗಿ ಗೆಲ್ಲಲು ಅವಕಾಶವಿದೆ. ಪ್ರತಿದಿನ ಗಿಫ್ಟ್ ವೋಚರ್ ಪಡೆಯುವ ಮತ್ತು ವಾರಕ್ಕೊಮ್ಮೆ ವಿಶೇಷ ಉಡುಗೊರೆ ಗೆಲ್ಲುವ ಅವಕಾಶವಿದೆ ಎಂದು ಅವರು ವಿವರ ನೀಡಿದರು.

ಸ್ಪಿನ್ನಿಂಗ್ ದಿ ಸ್ಪಿನ್ನರ್‌ನಡಿ 3,000 ರೂ. ಮತ್ತು ಹೆಚ್ಚಿನ ಶಾಪಿಂಗ್ ಮಾಡುವ ಗ್ರಾಹಕರು ಇದರಲ್ಲಿ ಭಾಗವಹಿಸಬಹುದು. 5,000 ರೂ. ವೌಲ್ಯದ ಶಾಪಿಂಗ್ ಮಾಡುವ ಗ್ರಾಹಕರಿಗೆ ಅದೃಷ್ಟ ಡ್ರಾದಲ್ಲಿ ದ್ವಿಚಕ್ರ ವಾಹನ ಗೆಲ್ಲುವ ಅವಕಾಶ. 7,000 ರೂ.ಗಳಿಗಿಂತ ಹೆಚ್ಚಿನ ಖರೀದಿ ಮಾಡುವ ಗ್ರಾಹಕರಿಗೆ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಗೆಲ್ಲುವ ಅವಕಾಶವಿದೆ. ಜೂ. 13, 14 ಮತ್ತು 15ರಂದು ಈದ್ ಮುಂಚಿತವಾಗಿ ಗ್ರಾಹಕರ ಅನೂಕೂಲಕ್ಕಾಗಿ ಮಾಲ್ ಸಮಯವನ್ನು 11 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಅರ್ಶದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಸಕ ಎಸ್.ಎಂ.ಸವೂದ್, ಕ್ರೈಸಿಸ್ ಮ್ಯಾನೇಜರ್ ಹರೀಶ್ ಶೆಟ್ಟಿ, ಮಾಲ್ ಮ್ಯಾನೇಜರ್ ನಿಶ್ಚಿತಾ ಸದಾನಂದ, ಡೆಪ್ಯುಟಿ ಜನರಲ್ ಮ್ಯಾನೇಜರ್ ಸೌಮ್ಯಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News