ಐಪಿಎಲ್ ಪ್ಲೇ-ಆಫ್ ಅರ್ಹತೆ: ಎರಡು ಸ್ಥಾನಕ್ಕಾಗಿ ಐದು ತಂಡಗಳ ಸ್ಪರ್ಧೆ

Update: 2018-05-18 09:43 GMT

ಹೊಸದಿಲ್ಲಿ, ಮೇ 18: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 14 ರನ್‌ಗಳಿಂದ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ-ಆಫ್‌ಗೆ ತೇರ್ಗಡೆಯಾಗುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ.

ಟೂರ್ನಮೆಂಟ್‌ನಲ್ಲಿ ಇನ್ನು 5 ಪಂದ್ಯಗಳು ಆಡಲು ಬಾಕಿಯಿವೆ. ಹೈದರಾಬಾದ್(18 ಅಂಕ)ಹಾಗೂ ಚೆನ್ನೈ(16) ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವುದರೊಂದಿಗೆ ಪ್ಲೇ-ಆಫ್ ಸ್ಥಾನ ದೃಢಪಡಿಸಿಕೊಂಡಿವೆ. ಐದು ತಂಡಗಳು ಉಳಿದೆರಡು ಪ್ಲೇ-ಆಫ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿ ತೊಡಗಿವೆ. ಆ 5 ತಂಡಗಳ ವಿವರ ಈ ಕೆಳಗಿನಂತಿವೆ..

ಕೋಲ್ಕತಾ ನೈಟ್ ರೈಡರ್ಸ್(13 ಪಂದ್ಯ, 7 ಗೆಲುವು, 6 ಸೋಲು, 14 ಅಂಕ)

ಕೆಕೆಆರ್ ತಂಡ ಒಟ್ಟು 16 ಅಂಕ ಗಳಿಸಬೇಕಾದರೆ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಲೇಬೇಕು. ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಒಂದು ವೇಳೆ ಸೋಲನುಭವಿಸಿದರೆ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಸೋಲುವುದನ್ನು ನಿರೀಕ್ಷಿಸಬೇಕಾಗುತ್ತದೆ. ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಗಿಂತ ಉತ್ತಮ ನೆಟ್ ರನ್‌ರೇಟ್ ಇರುವುದು ಕೆಕೆಆರ್‌ಗೆ ಅನುಕೂಲಕರವಾಗಿದೆ.

ಮುಂಬೈ ಇಂಡಿಯನ್ಸ್(13 ಪಂದ್ಯ, 6 ಗೆಲುವು, 7 ಸೋಲು, 12 ಅಂಕ)

ಪಂಜಾಬ್ ವಿರುದ್ಧ 3 ರನ್‌ನಿಂದ ಸೋತ ಬಳಿಕ ನೆಟ್ ರನ್‌ರೇಟ್‌ನಲ್ಲಿ ಕುಸಿತ ಕಂಡಿರುವ ಮುಂಬೈ ತಂಡ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಬೇಕಾದರೆ ರವಿವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಬೇಕಾಗಿದೆ. ಒಂದು ವೇಳೆ ಆರ್‌ಸಿಬಿ ತಂಡ ರಾಜಸ್ಥಾನ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಭಾರೀ ಅಂತರದ ಜಯ ಸಾಧಿಸಿದರೆ ಮುಂಬೈಯನ್ನು ಹಿಂದಿಕ್ಕುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(13 ಪಂದ್ಯ, 6 ಗೆಲುವು, 7 ಸೋಲು, 12 ಅಂಕ)

ಆರ್‌ಸಿಬಿ ತಂಡ 14 ಅಂಕ ಗಳಿಸಿ ಪ್ಲೇ-ಆಫ್ ವಿಶ್ವಾಸ ಜೀವಂತವಾಗಿರಿಸಿಕೊಳ್ಳಲು ಶನಿವಾರ ರಾಜಸ್ಥಾನವನ್ನು ಮಣಿಸಬೇಕು. ನೆಟ್‌ರನ್‌ರೇಟ್ 0.218 ರಿಂದ 0.264ಕ್ಕೆ ತಲುಪಿರುವುದು ಆರ್‌ಸಿಬಿಗೆ ಉತ್ತೇಜನಕಾರಿಯಾಗಿದೆ. ಒಂದು ವೇಳೆ ಆರ್‌ಸಿಬಿ 14 ಅಂಕ ಗಳಿಸಿ ಉಳಿದ ತಂಡಗಳೊಂದಿಗೆ ಸಮಬಲ ಸಾಧಿಸಿದರೆ ನೆಟ್ ರನ್‌ವೇಟ್ ಗಣನೆಗೆ ಬರಲಿದೆ.

ರಾಜಸ್ಥಾನ ರಾಯಲ್ಸ್(12 ಪಂದ್ಯ, 6 ಗೆಲುವು, 6 ಸೋಲು, 12 ಅಂಕ)

ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ ಫ್ರಾಂಚೈಸಿ ಶನಿವಾರ ಆರ್‌ಸಿಬಿ ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ. ನೆಟ್‌ರನ್‌ರೇಟ್ ಸಮಸ್ಯೆಯಿಂದ ಪಾರಾಗಲು ಆರ್‌ಸಿಬಿ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲುವುದು ರಹಾನೆಗೆ ಅತ್ಯಂತ ಮುಖ್ಯವಾಗಿದೆ. ಒಂದು ವೇಳೆ ಪಂಜಾಬ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದರೂ ರಾಜಸ್ಥಾನಕ್ಕೆ ಉತ್ತಮ ರನ್‌ರೇಟ್ ಕೈ ಹಿಡಿಯಬಹುದು.

ಕಿಂಗ್ಸ್ ಇಲೆವೆನ್ ಪಂಜಾಬ್(12 ಪಂದ್ಯ, 6 ಗೆಲುವು, 7 ಸೋಲು, 12 ಅಂಕ) 

ಪಂಜಾಬ್ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಬೇಕಾದರೆ ಚೆನ್ನೈ ವಿರುದ್ಧ ದೊಡ್ಡ ಅಂತರದ ಜಯ ಸಾಧಿಸುವುದು ಮಾತ್ರವಲ್ಲ ಶನಿವಾರ ಆರ್‌ಸಿಬಿ ತಂಡ ರಾಜಸ್ಥಾನವನ್ನು ಮಣಿಸಬೇಕಾಗುತ್ತದೆ. ರವಿವಾರ ಡೆಲ್ಲಿ ತಂಡ ಮುಂಬೈಗೆ ಸೋಲಬೇಕಾಗುತ್ತದೆ. ಪಂಜಾಬ್ ತಂಡ ಚೆನ್ನೈ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ನೆಟ್ ರನ್‌ರೇಟ್‌ನಲ್ಲಿ ರಾಜಸ್ಥಾನವನ್ನು ಹಿಂದಿಕ್ಕಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News