ಸಂಚಾರ ಸಮಸ್ಯೆ: ಸಂದೇಶ ರವಾನೆಗೆ ವಾಟ್ಸ್‌ಆ್ಯಪ್ ಸಂಖ್ಯೆ ಅನಾವರಣ

Update: 2018-05-18 11:58 GMT

ಮಂಗಳೂರು, ಮೇ 18: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸಂಚಾರ ಸಮಸ್ಯೆಗಳ ವಿವರ ಮತ್ತು ಅವುಗಳಿಗೆ ಪರಿಹಾರ ಅಥವಾ ಸಲಹೆಗಳಿಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಆಯುಕ್ತಾಲಯವು ಹೊಸ ವಾಟ್ಸ್‌ಆ್ಯಪ್ (9480802303) ಸಂಖ್ಯೆಯೊಂದರ ಖಾತೆ ತೆರೆದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಶುಕ್ರವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಈ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಅನಾವರಣಗೊಳಿಸಿದರು.

ಈ ಸಂದರ್ಭ ಮಾತನಾಡಿದ ಆಯುಕ್ತ ವಿಫುಲ್ ಕುಮಾರ್ ಸಾರ್ವಜನಿಕರು ಆಯುಕ್ತಾಲಯ ವ್ಯಾಪ್ತಿಯ ಸಂಚಾರ ದಟ್ಟನೆ, ಉಲ್ಲಂಘನೆ ಇತ್ಯಾದಿ ಸಮಸ್ಯೆ ಗಳಲ್ಲದೆ, ಪರಿಹಾರಕ್ಕಾಗಿ ಈ ಸಂಖ್ಯೆಯನ್ನು ಬಳಸಿಕೊಳ್ಳಬಹುದು ಎಂದು ಮನವಿ ಮಾಡಿದರು.

ಸುಳ್ಳು ಸಂದೇಶ ರವಾನೆ ವಿರುದ್ಧ ಪ್ರಕರಣ ದಾಖಲು

ಮತ ಎಣಿಕೆಯ ಸಂದರ್ಭ ಬಿಜೆಪಿ ಕಾರ್ಯಕರ್ತರು ಬೋಂದೆಲ್ ಚರ್ಚ್ ಮುಂದೆ ವಿಜಯೋತ್ಸವ ಆಚರಿಸಿದ್ದರು. ಈ ಚಿತ್ರವನ್ನು ಬಳಸಿಕೊಂಡು 10 ವರ್ಷದ ಹಿಂದೆ ತೊಕ್ಕೊಟ್ಟು ಸಮೀಪದ ಚರ್ಚ್‌ವೊಂದರ ಮೇಲೆ ದುಷ್ಕರ್ಮಿಗಳು ನಡೆಸಿದ ದಾಂಧಲೆ ಪ್ರಕರಣಕ್ಕೆ ಸಾಮ್ಯತೆ ಕಲ್ಪಿಸಿ ವಿಜಯೋತ್ಸವ ಸಂದರ್ಭ ಚರ್ಚ್ ಮೇಲೆ ದಾಳಿ ಮಾಡಲಾಗಿದೆ ಎಂದು ಬಿಂಬಿಸಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ರವಾನಿಸಿದ್ದರು. ಇದು ಸಮಾಜದಲ್ಲಿ ಅಶಾಂತಿಗೆ ಎಡೆಮಾಡಿಕೊಡುವ ಸಾಧ್ಯತೆ ಇರುವುದನ್ನು ಮನಗಂಡ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಇಂತಹ ಸಂದೇಶ ರವಾನೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತಿಳಿಸಿದರು.

ಇತ್ತೀಚಿನ ಚುನಾವಣೆಯ ಬಳಿಕ ಯಾವ ಚರ್ಚ್‌ನ ಮೇಲೆಯೂ ದಾಳಿ ನಡೆದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನಿಸಲಾ ಗುತ್ತದೆ. ಯಾರೋ ರವಾನಿಸಿದ್ದನ್ನು ಪರಾಮರ್ಶಿಸದೆ ಇತರರಿಗೆ ರವಾನೆ ಮಾಡಿದರೆ ಅಂತಹವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಈ ಬಗ್ಗೆ ತೀರ್ಪನ್ನು ಕೂಡ ನೀಡಿದೆ. ಹಾಗಾಗಿ ವಾಟ್ಸ್‌ಆ್ಯಪ್ ಮತ್ತಿತರ ಜಾಲತಾಣದಲ್ಲಿ ಸಂದೇಶ ರವಾನಿಸುವವರು ಎಚ್ಚರಿಕೆ ವಹಿಸಬೇಕು ಎಂದ ವಿಫುಲ್ ಕುಮಾರ್, ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡುವ ಸಲುವಾಗಿ ‘ಸೋಶಿಯಲ್ ಮೀಡಿಯಾ ಮೋನಿಟರ್ ಸೆಲ್’ವೊಂದನ್ನು ಆಯುಕ್ತಾಲಯದಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

8 ಮಂದಿಗೆ ನ್ಯಾಯಾಂಗ ಬಂಧನ: ಚುನಾವಣಾ ವಿಜಯೋತ್ಸವ ಸಂದರ್ಭ ಅಡ್ಯಾರ್ ಪದವಿನಲ್ಲಿ ಮೊನ್ನೆ ನಡೆದ ಕಲ್ಲು ತೂರಾಟ ಹಾಗೂ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ದಾವೂದ್ ಯಾನೆ ದಾವೂದ್ ಹಕೀಂ, ಮುಹಮ್ಮದ್ ನೌಷಾದ್, ಶಾಹುಲ್ ಹಮೀದ್, ಮುಹಮ್ಮದ್ ಜುನೈದ್, ಹರೀಶ್ ಪೂಜಾರಿ, ನಿಶಾಂತ್, ನಿತೇಶ್, ಅಭಿಶೇಕ್ ಎಂಬವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಸೆರೆ ವಿಧಿಸಲಾಗಿದೆ ಎಂದರು.

ಬೈಕ್ ರ್ಯಾಲಿಗೆ ಅನುಮತಿ ಇಲ್ಲ: ಬೈಕ್ ರ್ಯಾಲಿಗೆ ಪೊಲೀಸ್ ಇಲಾಖೆಯು ಅನುಮತಿ ನೀಡಿಲ್ಲ. ಮುಂದೆ ನೀಡುವುದೂ ಇಲ್ಲ. ಯಾಕೆಂದರೆ ವಿಜಯೋತ್ಸವ ಸಂದರ್ಭ ಮೂರಕ್ಕಿಂತ ಅಧಿಕ ಮಂದಿ ಬೈಕ್‌ನಲ್ಲಿ ಸವಾರಿ ಮಾಡುವುದು, ಹೆಲ್ಮೆಟ್ ಧರಿಸದಿರುವುದು, ಕೇಕೆ ಹಾಕಿ ಇತರರಿಗೆ ತೊಂದರೆ ಕೊಡುವುದಲ್ಲದೆ ಸಂಚಾರ ನಿಯಮ ಉಲ್ಲಂಘಿಸುತ್ತಾರೆ. ಇದನ್ನು ತಪ್ಪಿಸಲು ಬೈಕ್ ರ್ಯಾಲಿಗೆ ಅನುಮತಿ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News