×
Ad

‘ಪೊಲೀಸ್ ಫೋನ್ ಇನ್’ ಕಾರ್ಯಕ್ರಮದ ಪ್ರಗತಿ ಬಹಿರಂಗಪಡಿಸಿ: ಸಾರ್ವಜನಿಕರೊಬ್ಬರ ಆಗ್ರಹ

Update: 2018-05-18 17:35 IST

ಮಂಗಳೂರು, ಮೇ 18: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಈವರೆಗೆ ನಡೆಸಿದ ‘ಪೊಲೀಸ್ ಫೋನ್ ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲಿಗೆ ಸಂಬಂಧಿಸಿದಂತೆ ಇಲಾಖೆಯು ಕೈಗೊಂಡ ಕ್ರಮದ ಬಗ್ಗೆ ಪ್ರಗತಿ-ಅಂಶವನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕ ರೊಬ್ಬರು ಮನವಿ ಮಾಡಿದ ಪ್ರಸಂಗ ಶುಕ್ರವಾರ ನಡೆದ 79ನೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ನಡೆಯಿತು.

ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಅವರ ಮೊದಲ ಕಾರ್ಯಕ್ರಮ ಇದಾಗಿದ್ದು, ಅತ್ಯಂತ ಲವಲವಿಕೆಯಿಂದಲೇ ಸಾರ್ವಜನಿಕರ ಫೋನ್ ಕರೆಗಳನ್ನು ಸ್ವೀಕರಿಸಿ ದೂರುಗಳನ್ನು ಆಲಿಸಿದರಲ್ಲದೆ, ತನ್ನ ಅಧೀನದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ನಗರದ ವ್ಯಕ್ತಿಯೊಬ್ಬರು ಕರೆ ಮಾಡಿ ಪ್ರತೀ ಶುಕ್ರವಾರ ನಡೆಸುವ ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗುತ್ತಿದೆ. ಸಾರ್ವಜನಿಕರು ಸಲ್ಲಿಸಿದ ದೂರು, ಅಹವಾಲುಗಳಿಗೆ ಇಲಾಖೆಯು ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಿದರೆ ಒಳ್ಳೆಯದಿತ್ತು ಎಂದರು. ಇದರಿಂದ ಹರ್ಷಿತರಾದ ಪೊಲೀಸ್ ಆಯುಕ್ತರು ಇಲಾಖೆಯು ಕೈಗೊಂಡ ಪರಿಹಾರದ ವಿವರಗಳನ್ನು ತಿಳಿಸುವುದಾಗಿ ಭರವಸೆ ನೀಡಿದರು.

ನಂತರ ಅವರು ಮಾತನಾಡಿ ಜಿಲ್ಲಾಧಿಕಾರಿಗಳು ಬಸ್ ಪ್ರಯಾಣ ದರ ಹೆಚ್ಚಿಸಿದ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿಲ್ಲ. ಆದರೆ, ಖಾಸಗಿ ಬಸ್ಸಿನವರು ತಾವೇ ದರ ನಿಗದಿಪಡಿಸಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಈ ಸಂಬಂಧ ಜಿಲ್ಲಾಧಿಕಾರಿಯ ಜೊತೆ ಚರ್ಚಿಸುವುದಾಗಿ ತಿಳಿಸಿದರು. ನಗರದ ಪ್ರಮುಖ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಹೂವು ಮಾರಾಟ ಮಾಡುತ್ತಾರೆ, ನಾಯಿಗಳ ಹಾವಳಿ ಇದೆ, ಜನವಸತಿ ಪ್ರದೇಶದಲ್ಲಿ ವ್ಯಾಪಾರಿಗಳು ಗುಜರಿ ಸಾಮಗ್ರಿಗಳಿಗೆ ಗುದ್ದುವ ಶಬ್ದಕ್ಕೆ ತೊಂದರೆಯಾಗುತ್ತದೆ, ಹಂಪ್ಸ್ ಹಾಕಿಸಿ, ಬಸ್ ತಂಗುದಾಣಕ್ಕೆ ಕಾಯಕಲ್ಪ ಕಲ್ಪಿಸಿ, ಬಸ್‌ಗಳ ಅಮಿತ ವೇಗಕ್ಕೆ ಕಡಿವಾಣ ಹಾಕಿ, ಮುಖ್ಯರಸ್ತೆಯ ಇಕ್ಕೆಡೆಗಳಲ್ಲಿ ಮೀನು ವ್ಯಾಪಾರಕ್ಕೆ ಕಡಿವಾಣ ಹಾಕಿ, ಕಾರು ಮತ್ತಿತರ ವಾಹನಗಳ ಚಾಲಕರು ಬಳಸುವ ಹೆಡ್‌ಲೈಟ್‌ನಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ, ಅನಧಿಕೃತ ವಾಹನಗಳ ಪಾರ್ಕಿಂಗ್, ಖಾಸಗಿ ವ್ಯಕ್ತಿಗಳು ರಸ್ತೆ ಬದಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸುತ್ತಾರೆ, ಸಂಚಾರ ದಟ್ಟಣೆ ಕಡಿಮೆ ಮಾಡಿ ಇತ್ಯಾದಿ ಅಹವಾಲುಗಳನ್ನು ಮಹಿಳೆಯರು, ಹಿರಿಯ ನಾಗರಿಕರ ಸಹಿತ ಸುಮಾರು 23 ಮಂದಿ ಸಲ್ಲಿಸಿದರು.

ಡಿಸಿಪಿಗಳಾದ ಉಮಾ ಪ್ರಶಾಂತ್, ಹನುಮಂತರಾಯ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News