ಮಂಗಳೂರು: ರಾಜ್ಯಪಾಲರ ವಿರುದ್ಧ ಸಿಪಿಎಂ ಪ್ರತಿಭಟನೆ
ಮಂಗಳೂರು, ಮೇ 18: ರಾಜ್ಯಪಾಲರ ಸಂವಿಧಾನ ಬಾಹಿರ ಕ್ರಮವನ್ನು ವಿರೋಧಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾಕಾರ್ಯದರ್ಶಿ ಮಂಡಳಿ ಸದಸ್ಯ, ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ, ಸರಕಾರ ರಚನೆ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಹೀನ ಕೃತ್ಯಕ್ಕೆ ಇಳಿದಿದೆ. ಇದು ನಾಚಿಕೆಗೇಡು. ಬಿಜೆಪಿಗೆ ಕೇವಲ ಅಧಿಕಾರಕ ಬೇಕು. ಈ ಅಧಿಕಾರದ ಆಸೆಗಾಗಿ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲರು ತನ್ನ ಹುದ್ದೆಯನ್ನು ಘನತೆಯನ್ನು ಮನಗಂಡು ಪ್ರಜಾಪ್ರಭುತ್ವ ವೌಲ್ಯಗಳನ್ನು ಎತ್ತಿ ಹಿಡಿಯಬೇಕು. ಕೇಂದ್ರ ಸರಕಾರ ಕೈಗೊಂಬೆಯಾಗಿ ವರ್ತಿಸಬಾರದು ಎಂದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ರಾಜ್ಯದಲ್ಲಿ ಮೋದಿ ಅಲೆ ಇದೆ ಎಂಬುದು ಸುಳ್ಳು. ಮೋದಿ ಅಲೆ ಇದ್ದಿದ್ದರೆ ರಾಜ್ಯದಲ್ಲಿ ಬಿಜೆಪಿ ಬಹುಮತ ಬರಬೇಕಿತ್ತು. ಕೇವಲ 104 ಸೀಟುಗಳನ್ನು ಪಡೆದ ಬಿಜೆಪಿಗೆ ಜನತೆ ಬಹುಮತ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಮಾಜಿ ಜಿಲ್ಲಾ ಪಂಚಯತ್ ಸದಸ್ಯೆ ಪದ್ಮಾವತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ವಾಸುದೇವ ಉಚ್ಚಿಲ ಸ್ವಾಗತಿಸಿದರು.ಕೃಷ್ಣಪ್ಪ ಸಾಲ್ಯಾನ್ ವಂದಿಸಿದರು.