×
Ad

​‘ದಿ ವೀಕ್’ ಸಮೀಕ್ಷೆ: ಮಾಹೆ ದೇಶದ ನಂ.1 ಖಾಸಗಿ ವಿವಿ

Update: 2018-05-18 21:28 IST

ಉಡುಪಿ, ಮೇ 18: ‘ದಿ ವೀಕ್’ ಸಾಪ್ತಾಹಿಕ ನಡೆಸಿದ ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಸಮೀಕ್ಷೆಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮಣಿಪಾಲ (ಮಾಹೆ) ಸತತ ನಾಲ್ಕನೇ ವರ್ಷದಲ್ಲಿ ದೇಶದ ನಂ.1 ಖಾಸಗಿ ವಿವಿಯಾಗಿ ಆಯ್ಕೆಯಾಗಿದೆ.

ದಿ ವೀಕ್ ಸಾಪ್ತಾಹಿಕಕ್ಕಾಗಿ ನಡೆಸಲಾದ ಹಂಸಾ ರಿಸರ್ಚ್ ಸರ್ವೇಯಲ್ಲಿ ಮಾಹೆ, ಅಖಿಲ ಭಾರತ ಮಟ್ಟದ ವಿವಿಗಳಲ್ಲಿ 15ನೇ ಸ್ಥಾನದಲ್ಲಿದೆ. ಈ ಮೂಲಕ ಕಳೆದ ಬಾರಿ ಪಡೆದ ಸ್ಥಾನಕ್ಕಿಂತ ಐದು ಸ್ಥಾನ ಮೇಲಕ್ಕೇರಿದೆ. ದಕ್ಷಿಣ ಭಾರತದ ಖಾಸಗಿ ವಿವಿಗಳಲ್ಲಿ ಅಗ್ರರ್ಯಾಂಕ್ ಪಡೆದಿರುವ ಮಾಹೆ, ಸಮಗ್ರ ವಿವಿಗಳಲ್ಲಿ ಆರನೇ ಸ್ಥಾನವನ್ನು ಹೊಂದಿದೆ.

ಅದೇ ರೀತಿ 2018-19ನೇ ಸಾಲಿನ ಸಿ-ಫೋರ್ ಸರ್ವೇಯಲ್ಲೂ ಮಾಹೆ, ಭಾರತದ ಹಾಗೂ ಕರ್ನಾಟಕದ ನಂ.1 ಖಾಸಗಿ ವಿವಿ ಎನಿಸಿಕೊಂಡಿದೆ. ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಲಭ್ಯತೆಯ ವಿಷಯದಲ್ಲೂ ಮಾಹೆ ದೇಶದ ನಂ.1 ವಿವಿಯಾಗಿ ಆಯ್ಕೆಯಾಗಿದೆ ಎಂದು ಮಾಹೆ ವಿವಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಹೆ ವಿವಿಯ ಉಪಕುಲಪತಿ ಡಾ.ಎಚ್. ವಿನೋದ್ ಭಟ್, ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ ಹಾಗೂ ವಿವಿಯ ಶೈಕ್ಷಣಿಕ ಹಾಗೂ ಸಂಶೋಧನೆಯ ಉನ್ನತ ಗುಣಮಟ್ಟವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಬದ್ಧತೆಯ ದ್ಯೋತಕವಾಗಿದೆ. ನಾವೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಿಸುವ ದೇಶದ ಅಗ್ರಗಣ್ಯ ವಿದ್ಯಾಸಂಸ್ಥೆಗಳ ಫಲಿತಾಂಶವನ್ನು ಎದುರು ನೋಡುತಿದ್ದೇವೆ. ಇದರಲ್ಲೂ ನಾವು ದೇಶದ ಅಗ್ರಗಣ್ಯ 10 ವಿವಿಗಳಲ್ಲಿ ಒಂದು ಸ್ಥಾನವನ್ನು ಪಡೆಯುವ ಸಂಪೂರ್ಣ ಭರವಸೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News