×
Ad

ಪಾಕ್ ನ ಐಎಸ್ಐಗೆ ಸೂಕ್ಷ್ಮ ದಾಖಲೆಗಳ ರವಾನೆ: ಭಾರತೀಯ ರಾಯಭಾರಿ ಮಾಧುರಿ ಗುಪ್ತಾ ತಪ್ಪಿತಸ್ಥೆ

Update: 2018-05-18 23:01 IST

ಹೊಸದಿಲ್ಲಿ, ಮೇ 18: ಭಾರತಕ್ಕೆ ಸಂಬಂಧಿಸಿದ ಅಧಿಕೃತ ಮತ್ತು ಸೂಕ್ಷ್ಮ ದಾಖಲೆಗಳನ್ನು ಪಾಕಿಸ್ತಾನದ ಐಎಸ್ಐಗೆ ನೀಡಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮಾಧುರಿ ಗುಪ್ತಾ ತಪ್ಪಿತಸ್ಥೆ ಎಂದು ದಿಲ್ಲಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ .

ಮಾಧುರಿ ಗುಪ್ತಾ ಐಎಸ್ಐ ಏಜೆಂಟ್ ಜಮ್ಶೆಡ್ ಎಂಬಾತನನ್ನು ಪ್ರೀತಿಸುತ್ತಿದ್ದರು ಮತ್ತು ಆತನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಆಂಗ್ಲ ಸುದ್ದಿ ಮಾಧ್ಯಮ ವರದಿ ಮಾಡಿದೆ. ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶ ಸಿದ್ದಾರ್ಥ್ ಶರ್ಮಾ, ಗುಪ್ತಾರನ್ನು ಭಾರತೀಯ ದಂಡಸಂಹಿತೆ ಸೆಕ್ಷನ್ 3(1)(ಸಿ) ಭಾಗ 1 (ಮೂರು ವರ್ಷಗಳ ವರೆಗೆ ಶಿಕ್ಷೆ) ಮತ್ತು 120ಬಿಯ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 5ರಡಿಯಲ್ಲಿ ತಪ್ಪಿತಸ್ಥೆ ಎಂದು ತೀರ್ಪು ನೀಡಿದರು. ಆಕೆಯ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶನಿವಾರ ನಿರ್ಧರಿಸಲಿದೆ.

 ಗುಪ್ತಾ ರಹಸ್ಯ ಮಾಹಿತಿದಾರಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು 2010ರಲ್ಲಿ ತಿಳಿದುಬಂದ ಕೂಡಲೇ ಆಕೆಯನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಆಕೆ ಕೂಡಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ ದಿಲ್ಲಿ ಪೊಲೀಸ್‌ನ ವಿಶೇಷ ವಿಭಾಗ ಗುಪ್ತಾರನ್ನು 2010ರ ಎಪ್ರಿಲ್ 22ರಂದು ಬಂಧಿಸಿತ್ತು. 2020ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 310 ಜಲವಿದ್ಯುತ್ ಯೋಜನೆಗಳ ಪ್ರಸ್ತಾವವನ್ನು ಇಡಲಾಗಿದೆ ಎಂದು 2010ರ ಮಾರ್ಚ್‌ನಲ್ಲಿ ಐಎಸ್ಐ ಏಜೆಂಟ್ ಮುಬಶರ್ ರಝಾ ರಾಣಾ, ಮಾಧುರಿಗೆ ಮಾಹಿತಿ ನೀಡಿದ್ದ ಹಾಗೂ ಈ ಯೋಜನೆಗಳ ವರದಿ ಅಥವಾ ಜೆ ಆ್ಯಂಡ್ ಕೆ 2010ನ ವಾರ್ಷಿಕ ಯೋಜನೆಯನ್ನು ತರುವಂತೆ ಆಕೆಗೆ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಆಕೆ ರಜಾದಿನಗಳನ್ನು ಕಳೆಯುವ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದರು ಎಂದು ಗುಪ್ತಾರ ವಿಚಾರಣೆಯ ವೇಳೆ ಬಹಿರಂಗವಾಗಿತ್ತು.

 ವಿದೇಶಾಂಗ ವ್ಯವಹಾರ, ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಮತ್ತು ಭಾರತೀಯ ರಾಯಬಾರ ಕಚೇರಿಯಲ್ಲಿ ನೇಮಕಗೊಂಡಿರುವ ಅಧಿಕಾರಿಗಳ ಮತ್ತು ಅವರ ಕುಟುಂಬದ ಮಾಹಿತಿಯನ್ನೂ ಮಾಧುರಿ ಐಎಸ್ಐ ಜೊತೆ ಹಂಚಿಕೊಂಡಿದ್ದರು. ಇದು ಈ ಅಧಿಕಾರಿಗಳ ಜೊತೆಗೆ ಅವರ ಕುಟುಂಬಸ್ಥರ ಪ್ರಾಣಕ್ಕೂ ಅಪಾಯವನ್ನು ತಂದೊಡ್ಡಿತ್ತು. ಇನ್ನು ಭಯೋತ್ಪಾದನೆ, ಕಾಶ್ಮೀರ ಮತ್ತು ಅಫ್ಘಾನಿಸ್ತಾನದಲ್ಲಿ ಭಾರತ ಕಾರ್ಯಾಚರಣೆ ಮುಂತಾದ ಸೂಕ್ಷ್ಮ ವಿಷಯಗಳ ಬಗ್ಗೆಯೂ ಮಾಧುರಿ ಐಎಸ್ಐಯ ಜೊತೆ ಮಾಹಿತಿ ಹಂಚಿಕೊಂಡಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿತ್ತು.

ಈ ದಾಖಲೆಗಳನ್ನು ಬಹುತೇಕ ಸಂದರ್ಭಗಳಲ್ಲಿ ಮಾಧುರಿಯ ಕಂಪ್ಯೂಟರ್ ಅಥವಾ ಬ್ಲಾಕ್‌ಬೆರಿ ಫೋನ್‌ನಿಂದ ಇಮೇಲ್ ಮೂಲಕ ಕಳುಹಿಸಲಾಗುತ್ತಿತ್ತು. ಅದಕ್ಕಾಗಿಯೇ ಐಎಸ್ಐ ಮಾಧುರಿಗೆ ಪ್ರತ್ಯೇಕ ಇಮೇಲ್ ಐಡಿ ನೀಡಿತ್ತು ಎಂದು ತನಿಖೆಯ ವೇಳೆ ಬಹಿರಂಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News