ನಾನು ಕಲ್ಕಿ ಅವತಾರ, ಕಚೇರಿಗೆ ಬರಲು ಸಾಧ್ಯವಿಲ್ಲ ಎಂದ ಸರಕಾರಿ ಅಧಿಕಾರಿ !

Update: 2018-05-18 17:43 GMT

ಅಹ್ಮದಾಬಾದ್,ಮೇ 18: ಆಧ್ಯಾತ್ಮದಲ್ಲಿ ಆಸಕ್ತಿ,ದೇವರಲ್ಲಿ ಭಕ್ತಿ ಇವೆಲ್ಲ ಒಳ್ಳೆಯದೇ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗೆಯೇ ಆಧ್ಯಾತ್ಮ,ದೇವರ ಬಗ್ಗೆ ತೀರ ತಲೆ ಕೆಡಿಸಿಕೊಂಡರೆ ಅದೇ ಒಂದು ಹುಚ್ಚು ಆಗುತ್ತದೆ ಎನ್ನುವುದು ಬಲ್ಲವರ ಅಭಿಪ್ರಾಯ. ಇದಕ್ಕೆ ಗುಜರಾತ್ ಸರಕಾರದ ಸರ್ದಾರ್ ಸರೋವರ ಪುನರ್ವಸತಿ ಏಜೆನ್ಸಿ(ಎಸ್‌ಎಸ್‌ಪಿಎ)ಯ ಸೂಪರಿಂಟೆಂಡಿಂಗ್ ಇಂಜಿನಿಯರ್ ರಾಮಚಂದ್ರ ಫೇಫಾರ್ ತಾಜಾ ನಿದರ್ಶನವಾಗಿದ್ದಾರೆ. ತಾನು ವಿಷ್ಣುವಿನ 10ನೇ ಅವತಾರವಾಗಿರುವ ಕಲ್ಕಿ ಆಗಿದ್ದೇನೆ ಮತ್ತು ಜಾಗತಿಕ ಪ್ರಜ್ಞೆಯನ್ನು ಬದಲಿಸಲು ‘ತಪಸ್ಸು’ ಮಾಡುತ್ತಿರುವುದರಿಂದ ಕಚೇರಿಗೆ ಬರಲು ಸಾಧ್ಯವಿಲ್ಲ ಎಂದು ಈ ಫೇಫಾರ್ ಹೇಳಿದ್ದಾರೆ.

 ಇಲಾಖೆಯು ತನಗೆ ಜಾರಿಗೊಳಿಸಿದ್ದ ಶೋಕಾಸ್ ನೋಟಿಸ್‌ಗೆ ನೀಡಿರುವ ಉತ್ತರದಲ್ಲಿ,ತನ್ನ ತಪಸ್ಸಿನಿಂದಾಗಿಯೇ ದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಶೋಕಾಸ್ ನೋಟಿಸ್ ಮತ್ತು ಅದಕ್ಕೆ ಫೇಫಾರ್ ಉತ್ತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ‘ನೀವು ನಂಬದಿದ್ದರೂ ನಾನು ಭಗವಾನ್ ವಿಷ್ಣುವಿನ ಹತ್ತನೇ ಅವತಾರವಾಗಿದ್ದೇನೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಸಾಬೀತು ಮಾಡುತ್ತೇನೆ’ ಎಂದು ಈ ಆಧುನಿಕ ಕಲ್ಕಿ ಹೇಳಿಕೊಂಡಿದ್ದಾರೆ.

“2010 ಮಾರ್ಚ್‌ನಲ್ಲಿ ಅದೊಂದು ದಿನ ಕಚೇರಿಯಲ್ಲಿದ್ದಾಗ ನಾನು ಕಲ್ಕಿ ಅವತಾರ ಎಂಬ ಜ್ಞಾನೋದಯ ಆಗಿತ್ತು. ಅಂದಿನಿಂದಲೂ ನನ್ನಲ್ಲಿ ದೈವಿಕ ಶಕ್ತಿಗಳು ಮನೆಮಾಡಿವೆ” ಎಂದು ಶುಕ್ರವಾರ ರಾಜಕೋಟ್‌ನ ತನ್ನ ನಿವಾಸದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು

“ಜಾಗತಿಕ ಪ್ರಜ್ಞೆಯನ್ನು ಬದಲಿಸಲು ನಾನು ಮನೆಯಲ್ಲಿ ಐದನೇ ಆಯಾಮವನ್ನು ಪ್ರವೇಶಿಸಿ ತಪಸ್ಸು ಮಾಡುತ್ತಿದ್ದೇನೆ. ಇಂತಹ ತಪಸ್ಸನ್ನು ನಾನು ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ” ಎಂದು 60ರ ಪ್ರಾಯ ಸಮೀಪಿಸುತ್ತಿರುವ ಫೇಫಾರ್ ತನ್ನ ಉತ್ತರದಲ್ಲಿ ತಿಳಿಸಿದ್ದಾರೆ.

“ನಾನು ಕಚೇರಿಯಲ್ಲಿ ಕುಳಿತುಕೊಂಡು ‘ಟೈಂ ಪಾಸ್ ’ಮಾಡುವುದು ಒಳ್ಳೆಯದೋ ಅಥವಾ ದೇಶವನ್ನು ಬರದಿಂದ ರಕ್ಷಿಸಲು ಏನಾದರೂ ಒಳ್ಳೆಯ ಕೆಲಸವನ್ನು ಮಾಡುವುದು ಒಳ್ಳೆಯದೋ ಎನ್ನುವುದನ್ನು ಎಸ್‌ಎಸ್‌ಪಿಎ ನಿರ್ಧರಿಸಬೇಕು. ನಾನು ಕಲ್ಕಿ ಅವತಾರವಾಗಿರುವುದರಿಂದಲೇ ಭಾರತದಲ್ಲಿ ಒಳ್ಳೆಯ ಮಳೆಯಾಗುತ್ತಿದೆ” ಎಂದಿದ್ದಾರೆ.

ಫೇಫಾರ್ ಕಳೆದ ಎಂಟು ತಿಂಗಳಲ್ಲಿ ಕೇವಲ 16 ದಿನ ಮಾತ್ರ ವಡೋದರಾದ ತನ್ನ ಕಚೇರಿಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News