ಫೆಲೆಸ್ತೀನೀಯರ ವಿರುದ್ಧದ ಅಪರಾಧಕ್ಕಾಗಿ ಇಸ್ರೇಲ್ ವಿರುದ್ಧ ತನಿಖೆ: ಅರಬ್ ಲೀಗ್ ಒತ್ತಾಯ

Update: 2018-05-18 18:18 GMT

ಕೈರೋ (ಈಜಿಪ್ಟ್), ಮೇ 18: ಗಾಝಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನೀಯರ ವಿರುದ್ಧ ನಡೆಸಿದ 'ಅಪರಾಧ'ಗಳಿಗಾಗಿ ಇಸ್ರೇಲ್ ಸೈನಿಕರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ಅರಬ್ ಲೀಗ್ ಒತ್ತಾಯಿಸಿದೆ.

ಸೋಮವಾರ ಇಸ್ರೇಲ್-ಗಾಝಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಫೆಲೆಸ್ತೀನೀಯರ ಮೇಲೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ 60ಕ್ಕೂ ಅಧಿಕ ಪ್ರತಿಭಟನಕಾರರು ಬಲಿಯಾಗಿದ್ದರು.

ಅಮೆರಿಕವು ತನ್ನ ಇಸ್ರೇಲ್ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ವರ್ಗಾಯಿಸುವುದನ್ನು ವಿರೋಧಿಸಿ ಅವರು ಪ್ರತಿಭಟಿಸುತ್ತಿದ್ದರು.

ಇದು 2014ರ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಬಳಿಕ, ಗಾಝಾದಲ್ಲಿ ನಡೆದ ಅತ್ಯಂತ ಭೀಕರ ಹಿಂಸಾಚಾರವಾಗಿದೆ.

ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಡೆದ ಅರಬ್ ವಿದೇಶ ಸಚಿವರ ವಿಶೇಷ ಸಭೆಯಲ್ಲಿ ಮಾತನಾಡಿದ ಅರಬ್ ಲೀಗ್ ಮುಖ್ಯಸ್ಥ ಅಹ್ಮದ್ ಅಬುಲ್, ಈ ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.

''ಆಕ್ರಮಣಶಾಹಿ ಶಕ್ತಿಗಳು ನಡೆಸಿದ ಈ ಅಪರಾಧದ ಬಗ್ಗೆ ವಿಶ್ವಾಸಾರ್ಹ ಅಂತಾರಾಷ್ಟ್ರೀಯ ತನಿಖೆ ನಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ'' ಎಂದು ಅವರು ಹೇಳಿದರು.

''ಅಂತಾರಾಷ್ಟ್ರೀಯ ಕಾನೂನು ಮತ್ತು ವ್ಯವಸ್ಥೆ ವಿರುದ್ಧ ಸಾರಾಸಗಟು ಆಕ್ರಮಣ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಇಸ್ರೇಲ್‌ನ ಅಮೆರಿಕ ರಾಯಭಾರ ಕಚೇರಿಯು ಆಕ್ರಮಿತ ಜೆರುಸಲೇಂಗೆ ಸ್ಥಳಾಂತರವಾಗಿರುವುದೇ ಉದಾಹರಣೆ'' ಎಂದರು.

ಗಾಝಾ ನಿವಾಸಿಗಳನ್ನು ಕೊಳೆಗೇರಿಗಳಲ್ಲಿ ಕೂಡಿ ಹಾಕಿದ ಇಸ್ರೇಲ್:  ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಮೇ 18: ಇಸ್ರೇಲ್ ವ್ಯವಸ್ಥಿತವಾಗಿ ಫೆಲೆಸ್ತೀನೀಯರನ್ನು ಅವರ ಮಾನವಹಕ್ಕುಗಳಿಂದ ವಂಚಿತಗೊಳಿಸಿದೆ ಹಾಗೂ ಗಾಝಾದಲ್ಲಿರುವ 19 ಲಕ್ಷ ಮಂದಿಯನ್ನು ಹುಟ್ಟಿನಿಂದ ಸಾವಿನವರೆಗೆ ವಿಷಕಾರಿ ಕೊಳೆಗೇರಿಗಳಲ್ಲಿ ಕೂಡಿ ಹಾಕಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝೈದ್ ರಅದ್ ಅಲ್-ಹುಸೈನ್ ಶುಕ್ರವಾರ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ವಿಶೇಷ ಅಧಿವೇಶನವನ್ನು ಉದ್ಘಾಟಿಸಿದ ಝೈದ್, ಇಸ್ರೇಲನ್ನು ಕಟುವಾಗಿ ಟೀಕಿಸಿದರು. ಇಸ್ರೇಲ್ ಭದ್ರತಾ ಪಡೆಗಳು ಸೋಮವಾರ ಒಂದೇ ದಿನ 60 ಫೆಲೆಸ್ತೀನೀಯರನ್ನು ಕೊಂದಿವೆ ಎಂದು ಅವರು ಹೇಳಿದರು. ''ಆಕ್ರಮಣವನ್ನು ಕೊನೆಗೊಳಿಸಿ, ಆಗ ಹಿಂಸಾಚಾರ ಮತ್ತು ಅಭದ್ರತೆ ಬಹುತೇಕ ಹೋಗುತ್ತದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News